ಕೊಂಕಣಿ ಸಾಂಸ್ಕೃತಿಕ ಸಂಘಟನೆ ಮಂಡ್ ಸೊಭಾಣ್ನ 40ನೇ ವರ್ಷದ ಸಂಭ್ರಮದ ಅಂಗವಾಗಿ ಆಯೋಜಿಸಲಾಗಿರುವ ಪ್ರಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನಕ್ಕೆ ಮಂಗಳವಾರ ಮುಂಜಾನೆ 5 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಅದ್ದೂರಿ ಚಾಲನೆ ದೊರೆಯಿತು. ನವೆಂಬರ್ 3ರಿಂದ 15ರವರೆಗೆ ನಡೆಯಲಿರುವ 13 ದಿನಗಳ ಈ ಅಂತಾರಾಷ್ಟ್ರೀಯ ಸಮ್ಮೇಳನವು ಜಗತ್ತಿನಾದ್ಯಂತ ಇರುವ ಕೊಂಕಣಿ ಭಾಷಿಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶ ಹೊಂದಿದೆ.

ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಸಮ್ಮೇಳನವನ್ನು ಉದ್ಘಾಟಿಸಿದರು. ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತಿ ವಂ. ಡಾ. ಪೀಟರ್ ಪೌಲ್ ಸಲ್ಡಾನ್ಹಾ ಅವರು ಆಶೀರ್ವಚನ ನೀಡಿದರು, ಬೆಳಗ್ಗೆ ಸರಿಯಾಗಿ 6 ಗಂಟೆಗೆ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಗುಮಟ ವಾದ್ಯ ನುಡಿಸುವ ಮೂಲಕ ನಿರಂತರ ಗಾಯನ ಮ್ಯಾರಥಾನ್ಗೆ ಚಾಲನೆ ನೀಡಿದರು.

ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿ “ಕೊಂಕಣಿ ನಿರೊಂತರಿ – ಸೊಂಸಾರ್ ಸೊರಾಸೊರಿ” (ಜಗತ್ತಿನ ಕೊನೆಯವರೆಗೂ ನಿರಂತರ ಕೊಂಕಣಿ) ಎಂಬ ಹೆಸರಿನಲ್ಲಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸುವ ಪ್ರಯತ್ನ ನಡೆಯಲಿದೆ. ಸತತ 12 ದಿನಗಳ ಕಾಲ ನಿರಂತರ ಗಾಯನ ಮ್ಯಾರಥಾನ್ ಆಯೋಜಿಸಲಾಗಿದ್ದು, 300 ಗಾಯನ ತಂಡಗಳು ಸರದಿಯಂತೆ ಭಾಗವಹಿಸಲಿವೆ. ಜಗತ್ತಿನ ವಿವಿಧ ಭಾಗಗಳಿಂದ 6,700ಕ್ಕೂ ಅಧಿಕ ಗಾಯಕರು ಪಾಲ್ಗೊಳ್ಳಲಿದ್ದು ಗೋವಾದ 53 ತಂಡಗಳು ಇದರಲ್ಲಿ ಸೇರಿವೆ, ವಿವಿಧ ಕೊಂಕಣಿ ಉಪಭಾಷೆಗಳು, ಸಮುದಾಯಗಳು ಮತ್ತು ಸಂಗೀತ ಪರಂಪರೆಗಳನ್ನು ಪ್ರತಿನಿಧಿಸುವ 4,500ಕ್ಕೂ ಅಧಿಕ ಹಾಡುಗಳನ್ನು ಯಾವುದೇ ಹಾಡು ಅಥವಾ ಗಾಯಕನ ಪುನರಾವರ್ತನೆಯಿಲ್ಲದೆ ಪ್ರಸ್ತುತಪಡಿಸುವ ಗುರಿ ಹೊಂದಲಾಗಿದೆ.

ಗಿನ್ನೆಸ್ ದಾಖಲೆ ಪ್ರಯತ್ನಕ್ಕೆ ಚಾಲನೆ ನೀಡಿ ಮಾತನಾಡಿದ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್, ಮಂಡ್ ಸೊಭಾಣ್ ಮತ್ತು ಸ್ವಾಗತ ಸಮಿತಿಯ ಕಾರ್ಯವನ್ನು ಶ್ಲಾಘಿಸಿದರು. ಕೊಂಕಣಿ ಭಾಷೆಯಲ್ಲಿ ಉಪಭಾಷೆಗಳು ಬದಲಾಗಬಹುದು ಆದರೆ ಕೊಂಕಣಿ ಜನರ ಹೃದಯ ಮತ್ತು ಭಾಷೆಯ ಭಾವನೆ ಒಂದೇ ಆಗಿದೆ ಎಂದರು.
ಗೋವಾದಲ್ಲಿ ಕೊಂಕಣಿ ಅಧಿಕೃತ ಭಾಷೆಯಾಗಿದ್ದು ಸರ್ಕಾರದಿಂದ ಅಗತ್ಯ ಪ್ರೋತ್ಸಾಹ ದೊರೆಯುತ್ತಿದೆ. ಆದರೆ ಮಂಗಳೂರಿನ ಕೊಂಕಣಿ ಭಾಷಿಕರು ಯಾವುದೇ ಸರ್ಕಾರಿ ವ್ಯವಸ್ಥೆಗಳ ನೆರವಿಲ್ಲದೆ ತಮ್ಮ ಪರಿಶ್ರಮ ಮತ್ತು ಸಮರ್ಪಣೆಯಿಂದ ಭಾಷೆಯನ್ನು ಜೀವಂತವಾಗಿಟ್ಟಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಗೋವಾದ ಹೊರಗಿರುವ ಕೊಂಕಣಿ ಸಾಧಕರನ್ನೂ ಗೋವಾ ಸರ್ಕಾರ ತನ್ನ ಅಧಿಕೃತ ರಾಜ್ಯ ಪ್ರಶಸ್ತಿಗಳಿಗೆ ಪರಿಗಣಿಸುತ್ತದೆ ಎಂದರು.

ಗೋವಾ ಮತ್ತು ಕರಾವಳಿ ಕರ್ನಾಟಕ ರಾಜ್ಯಗಳ ಗಡಿಗಳು ಬೇರೆಬೇರೆಯಾಗಿದ್ದರೂ ಎರಡೂ ಪ್ರದೇಶಗಳು ಒಂದೇ ಕರಾವಳಿ, ಸಂಸ್ಕೃತಿ ಮತ್ತು ಜೀವನಶೈಲಿಯನ್ನು ಹಂಚಿಕೊಂಡಿವೆ. ಈ ಸಾಂಸ್ಕೃತಿಕ ಬಾಂಧವ್ಯ ಸದಾಕಾಲ ಮುಂದುವರಿಯಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಗೋವಾದ ಕ್ಯಾಲಂಗುಟ್ ಕ್ಷೇತ್ರದ ಶಾಸಕ ಮೈಕಲ್ ಲೋಬೋ, ದಿವಂಗತ ಎರಿಕ್ ಒಝಾರಿಯೊ ಅವರು ಕೊಂಕಣಿ ಸಂಸ್ಕೃತಿಯ ಬೆಳವಣಿಗೆಗೆ ನೀಡಿದ ಜೀವಮಾನದ ಕೊಡುಗೆಯನ್ನು ಸ್ಮರಿಸಿದರು, ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವಲ್ಲಿ ಅವರು ವಹಿಸಿದ ಪಾತ್ರ ಮಹತ್ವದ್ದಾಗಿದೆ ಎಂದರು. ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಎಲ್ಲ ತಂಡಗಳಿಗೆ ಶುಭ ಹಾರೈಸಿದ ಅವರು ಗೋವಾದಿಂದ ಹೆಚ್ಚಿನ ಸಂಖ್ಯೆಯಲ್ಲಿ ತಂಡಗಳು ಪಾಲ್ಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಈ ಮಹಾಸಮ್ಮೇಳನವನ್ನು ಮಂಡ್ ಸೊಭಾಣ್ನ ಸ್ಥಾಪಕ ಹಾಗೂ ದೂರದೃಷ್ಟಿಯ ನಾಯಕ ದಿವಂಗತ ಎರಿಕ್ ಒಝಾರಿಯೊ ಅವರ ಸ್ಮರಣೆಗೆ ಸಮರ್ಪಿಸಲಾಗಿದೆ.
ಮಂಡ್ ಸೊಭಾಣ್ ಅಧ್ಯಕ್ಷ ಲೂಯಿಸ್ ಜೆ. ಪಿಂಟೊ ಅವರು ಗಣ್ಯರನ್ನು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ರೈನೆಲ್ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಗೋವಾದ ಶಾಸಕರಾದ ಮೈಕಲ್ ಲೋಬೋ ಮತ್ತು ದೆಲಿಲಾ ಲೋಬೋ, ಸ್ವಾಗತ ಸಮಿತಿ ಸದಸ್ಯ ಡಾಲ್ಫಿ ಪ್ರಶಾಂತ್ ಡಿಸೋಜ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಜಾಯ್ಸ್ ಒಝಾರಿಯೊ, ರಾಯ್ ಕ್ಯಾಸ್ಟೆಲಿನೊ, ಪ್ರಕಾಶ್ ಶೆಟ್ಟಿ ಮಂಗಳೂರು, ಎರಿಕ್ ಕೊರೆಯಾ, ರೊನಾಲ್ಡ್ ಸಿಲ್ವನ್ ಡಿಸೋಜ ಹಾಗೂ ಕೃಷ್ಣಪ್ರಸಾದ್ ಉಪಸ್ಥಿತರಿದ್ದರು.

