ದಕ್ಷಿಣಕನ್ನಡ

ಮಂಗಳೂರು:- “ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದಲ್ಲಿ ಪಂಚಾಯತ್ ವ್ಯವಸ್ಥೆ ದಿವಾಳಿ” ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯದ ವಿರುದ್ಧ ನೀರುಮಾರ್ಗದಲ್ಲಿ ನಮ್ಮ ಹಕ್ಕು ನಮಗೆ ನೀಡಿ ಹಕ್ಕೊತ್ತಾಯ ಸಭೆ:- ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಹಾಗೂ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ತೀವ್ರ ವಾಗ್ದಾಳಿ.

ಮಂಗಳೂರು:- “ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದಲ್ಲಿ ಪಂಚಾಯತ್ ವ್ಯವಸ್ಥೆ ದಿವಾಳಿ” ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯದ ವಿರುದ್ಧ ನೀರುಮಾರ್ಗದಲ್ಲಿ ನಮ್ಮ ಹಕ್ಕು ನಮಗೆ ನೀಡಿ ಹಕ್ಕೊತ್ತಾಯ ಸಭೆ:- ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಹಾಗೂ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ತೀವ್ರ ವಾಗ್ದಾಳಿ.

ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದಲೂ ಸರಣಿ ಹಗರಣಗಳಲ್ಲಿ ಮುಳುಗಿದ್ದು ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಬಡವರ ರಕ್ತ ಹೀರುವ ಕೆಲಸ ಮಾಡುತ್ತಿದೆ ಎಂದು ಮಂಗಳೂರು ನಗರ ಉತ್ತರ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಹಾಗೂ ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಜಂಟಿಯಾಗಿ ಗುಡುಗಿದ್ದಾರೆ.

ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ಉತ್ತರ ಮಂಡಲದ ನೀರುಮಾರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯದ ವಿರುದ್ಧ ಹಮ್ಮಿಕೊಳ್ಳಲಾಗಿದ್ದ “ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ – ನಮ್ಮ ಹಕ್ಕು ನಮಗೆ ನೀಡಿ” ಜನಾಂದೋಲನದ ಬೃಹತ್ ಹಕ್ಕೊತ್ತಾಯ ಸಭೆಯಲ್ಲಿ ಇಬ್ಬರೂ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಡಾ. ವೈ. ಭರತ್ ಶೆಟ್ಟಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾದರೂ ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀರುಮಾರ್ಗ ಪಂಚಾಯತ್ ಒಂದರಲ್ಲೇ 8 ರಿಂದ 10 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಚರಂಡಿ ಸೇರಿದಂತೆ ಶೇಕಡಾ 80 ರಷ್ಟು ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಹಿಂದಿನ ಶಾಸಕರಾದ ಪಾಲೇಮಾರ್ ಅವರೂ ಸೇರಿದಂತೆ ಬಿಜೆಪಿಯ ಶಾಸಕರು ಗ್ರಾಮಗಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿದ್ದರು, ಆದರೆ ಇಂದು ಸಣ್ಣ ತೋಡು, ರಸ್ತೆ ಅಥವಾ ಸೇತುವೆ ನಿರ್ಮಾಣಕ್ಕೂ ಸರ್ಕಾರದಲ್ಲಿ ನಯಾಪೈಸೆ ಹಣವಿಲ್ಲದಂತಾಗಿದೆ.

ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಬಡವರಿಗೆ ಆಶ್ರಯ ಮನೆಗಳನ್ನು ನೀಡಲಾಗುತ್ತಿತ್ತು ಆದರೆ ಈ ಸರ್ಕಾರ ಮೂರು ವರ್ಷಗಳಲ್ಲಿ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ, ಬಡ ಹಿರಿಯ ಜೀವಗಳಿಗೆ ನೀಡುತ್ತಿದ್ದ ಸಂಧ್ಯಾ ಸುರಕ್ಷಾ ವೃದ್ಧಾಪ್ಯ ವೇತನ ಹಾಗೂ ಅಂಗವಿಕಲರ ಪಿಂಚಣಿಗೂ ಕತ್ತರಿ ಹಾಕಿ ತಿಂಗಳುಗಟ್ಟಲೆ ಸತಾಯಿಸಲಾಗುತ್ತಿದೆ. ಜನನ ಪ್ರಮಾಣಪತ್ರ, ಮರಣ ಪ್ರಮಾಣಪತ್ರ ಹಾಗೂ ನೋಂದಣಿ ಶುಲ್ಕಗಳ ಮೇಲೆ ದುಪ್ಪಟ್ಟು ತೆರಿಗೆ ಹಾಕಿ ಜನಸಾಮಾನ್ಯರನ್ನು ಲೂಟಿ ಮಾಡುತ್ತಿದ್ದಾರೆ. ನೀರುಮಾರ್ಗ ಭಾಗದ ಶಾಲಾ ಮಕ್ಕಳು ಮತ್ತು ಸಾರ್ವಜನಿಕರ ಸಂಚಾರಕ್ಕೆ ಸರಿಯಾಗಿ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯವನ್ನೂ ಒದಗಿಸಲಾಗದ ಅಸಮರ್ಥ ಆಡಳಿತ ಇದಾಗಿದೆ. ಮುಖ್ಯಮಂತ್ರಿಗಳು ಮಂಗಳೂರಿಗೆ ಬಂದು 30 ಸಾವಿರ ಕೋಟಿ ಘೋಷಣೆ ಮಾಡುತ್ತಾರೆ ಆದರೆ ವಾಸ್ತವದಲ್ಲಿ ನಯಾಪೈಸೆ ಅನುದಾನವಿಲ್ಲ ಎಂದು ಅವರದೇ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ತಹಶೀಲ್ದಾರ್ ಕಚೇರಿ, ಪೊಲೀಸ್ ಠಾಣೆ, ಪಂಚಾಯಿತಿಗಳಲ್ಲಿ ವರ್ಗಾವಣೆ ದಂಧೆ ಮತ್ತು ಲಂಚಾವತಾರ ಮುಗಿಲು ಮುಟ್ಟಿದ್ದು ಸರ್ಕಾರಿ ಅಧಿಕಾರಿಗಳು ಜನಸಾಮಾನ್ಯರಿಗೆ ಕನಿಷ್ಠ ಗೌರವ ನೀಡದೆ ದರ್ಪ ತೋರುತ್ತಿದ್ದಾರೆ ಎಂದು ಎಚ್ಚರಿಸಿದರು.

ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಯಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸುಮಾರು 96ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ್ದೇನೆ. ಪ್ರತಿಯೊಂದು ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿ ಸರ್ಕಾರದ ಅನುದಾನವಿಲ್ಲದೆ ಕಣ್ಣೀರಿಡುತ್ತಿದ್ದಾರೆ. ಪಂಚಾಯಿತಿಗಳಿಗೆ ಬರುವ ₹10 ಲಕ್ಷ ಶಾಸನಬದ್ಧ ಅನುದಾನದಲ್ಲಿ ₹6 ಲಕ್ಷ ಹಣವನ್ನು ಕುಡಿಯುವ ನೀರಿನ ಕರೆಂಟ್ ಬಿಲ್ ಕಟ್ಟುವುದಕ್ಕೇ ಬಳಸಬೇಕಾಗಿದೆ. ಉಳಿದ ₹4 ಲಕ್ಷ ಸಿಬ್ಬಂದಿ ವೇತನಕ್ಕೆ ಸರಿಯಾಗುತ್ತಿದ್ದು ಹಳ್ಳಿಗಳಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ನಯಾಪೈಸೆ ಹಣ ಬಿಡುಗಡೆಯಾಗಿಲ್ಲ ಇಂದು ಗ್ರಾಮಗಳಲ್ಲಿ ಕುಡಿಯುವ ನೀರು ಅಥವಾ ನೈರ್ಮಲ್ಯದ ಕೆಲಸಗಳು ನಡೆಯುತ್ತಿದ್ದರೆ ಅದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 15 ಮತ್ತು 16ನೇ ಹಣಕಾಸು ಆಯೋಗ ಜಲಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಯೋಜನೆಯ ಅನುದಾನದಿಂದ ಮಾತ್ರ.

ರಾಜ್ಯದಲ್ಲಿ 2,84,000ಕ್ಕೂ ಅಧಿಕ ಸರ್ಕಾರಿ ಹುದ್ದೆಗಳು ಖಾಲಿ ಬಿದ್ದಿದ್ದರೂ ಭರ್ತಿ ಮಾಡದೆ ಯುವಜನತೆಗೆ ದ್ರೋಹ ಬಗೆಯಲಾಗಿದೆ. ಕೆಪಿಎಸ್‌ಸಿ ಮೂಲಕ 2024ರಲ್ಲಿ ಪಿಡಿಒ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದರೂ ಇಂದಿಗೂ ಪರೀಕ್ಷೆ ನಡೆಸಿಲ್ಲ ಯುವನಿಧಿ ಹೆಸರಿನಲ್ಲಿ ನಿರುದ್ಯೋಗಿ ಯುವಕರಿಗೆ ಭರವಸೆ ನೀಡಿ ಈಗ ಅದಕ್ಕೂ ಕತ್ತರಿ ಹಾಕಲಾಗಿದೆ. 11A ಮತ್ತು 11B ದಾಖಲೆಗಳಿಗಾಗಿ ಬಡವರು ವರ್ಷಗಟ್ಟಲೆ ಕಚೇರಿಗಳಿಗೆ ಅಲೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ವಾಲ್ಮೀಕಿ ನಿಗಮದ ₹187 ಕೋಟಿ ಲೂಟಿ, ಮೂಡಾ ಹಗರಣ, ಅಬಕಾರಿ ಇಲಾಖೆಯ ಲೂಟಿ ಸೇರಿದಂತೆ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಗ್ರಾಮ ಪಂಚಾಯತ್ ಮಟ್ಟದಿಂದಲೇ ಜನಾಂದೋಲನ ರೂಪಿಸಿ ಈ ಸರ್ಕಾರವನ್ನು ಕಿತ್ತೊಗೆಯುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ಮಂಗಳೂರು ನಗರ ಉತ್ತರ ಮಂಡಲದ ಅಧ್ಯಕ್ಷರಾದ ಶ್ರೀ ರಾಜೇಶ್ ಕೊಟ್ಟಾರಿ, ಮಾಜಿ ಮೇಯರ್ ಜಯಾನಂದ ಅಂಚನ್, ಮಾಜಿ ಪಂಚಾಯತ್ ಅಧ್ಯಕ್ಷರು ಕಸ್ತೂರಿ, ಶಕ್ತಿ ಕೇಂದ್ರ ಪ್ರಮುಖ್ ಯಶ್ವಿತ್ ಕುಂದರ್ ಸೇರಿದಂತೆ ಪಕ್ಷದ ಹಿರಿಯರು, ವಿವಿಧ ಮೋರ್ಚಾಗಳ ಪ್ರಮುಖರು,ಸೇರಿದಂತೆ ಪಕ್ಷದ ಪ್ರಮುಖರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *