ದಕ್ಷಿಣಕನ್ನಡ

ಅನಾರೋಗ್ಯದಿಂದ ಗುಣಮುಖರಾಗಿ ಮರಳಿದ “ಡಾ. ಎಂ.ಎನ್. ರಾಜೇಂದ್ರ ಕುಮಾರ್” ಅವರ ಕೃತಜ್ಞತಾ ಮಾತುಗಳು, ಸಹಕಾರಿ ಕ್ಷೇತ್ರದ ಅಭಿವೃದ್ಧಿಯ ಸಂಕಲ್ಪ, ಅಶಕ್ತರಿಗೆ ನೆರವು ಹಾಗೂ ಪರಿಸರಸ್ನೇಹಿ ಯೋಜನೆಗೆ ನೀಡಿದ ವಾಹನ ಕೊಡುಗೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆ.

ಪೇಜಾವರ ಶ್ರೀಗಳು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿದ ಪೇಜಾವರ ಶ್ರೀಗಳು ಡಾ. ರಾಜೇಂದ್ರ ಕುಮಾರ್ ಅವರು ಜಾತಿ ಸಮುದಾಯದ ಭೇದವಿಲ್ಲದೆ ಎಲ್ಲರೊಂದಿಗೆ ಸಮಾನತೆ ಮತ್ತು ಸಹಕಾರದ ಮನೋಭಾವದಿಂದ ಸೇವೆ ಸಲ್ಲಿಸುತ್ತಿದ್ದು ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರ ಆರೋಗ್ಯ, ಆಯಸ್ಸು ಮತ್ತು ಉತ್ತಮ ಭವಿಷ್ಯಕ್ಕಾಗಿ ಎಲ್ಲರೂ ದೇವರಲ್ಲಿ ಪ್ರಾರ್ಥಿಸಬೇಕು ಎಂದು ಹೇಳಿದರು.

ಉಡುಪಿ ಜಿಲ್ಲಾಡಳಿತ ದೇವಸ್ಥಾನಗಳಲ್ಲಿ ದೇವರಿಗೆ ಅರ್ಪಿಸಿದ ಬಳಿಕ ಉಳಿಯುವ ಹೂವುಗಳನ್ನು ಮರುಬಳಕೆ ಮಾಡುವ ಉದ್ದೇಶದಿಂದ “ಉಡುಪಿ ಸುಗಂಧ” ಎಂಬ ವಿನೂತನ ಪರಿಸರಸ್ನೇಹಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಗೆ ಹೂವುಗಳ ಸಂಗ್ರಹಕ್ಕಾಗಿ ಡಾ. ಎಂ.ಎನ್. ರಾಜೇಂದ್ರ ಕುಮಾರ್ ವಾಹನ ಕೊಡುಗೆ ನೀಡಿದ್ದು, ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಅವರಿಗೆ ವಾಹನದ ಕೀಲಿಯನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಅವರು, ದೇವರ ಮುಡಿಗೇರಿದ ಹೂವು ಕಸಕ್ಕೆ ಸೇರಬಾರದು ಎಂಬ ಉದ್ದೇಶದಿಂದ ದೇವಸ್ಥಾನಗಳಿಂದ ಹೂವುಗಳನ್ನು ಸಂಗ್ರಹಿಸಿ, ಅವುಗಳಿಂದ ಪರಿಸರಸ್ನೇಹಿ ಧೂಪದ ಕಡ್ಡಿಗಳು ಹಾಗೂ ಸುಗಂಧ ದ್ರವ್ಯಗಳನ್ನು ತಯಾರಿಸಲಾಗುತ್ತದೆ ಎಂದು ತಿಳಿಸಿದರು.
ಈಗಾಗಲೇ ಯೋಜನೆಯಡಿ 30 ಮಹಿಳೆಯರಿಗೆ ತರಬೇತಿ ನೀಡಲಾಗಿದೆ. ಹೂವಿನ ತ್ಯಾಜ್ಯವನ್ನು ಉಪಯುಕ್ತ ಉತ್ಪನ್ನಗಳಾಗಿ ಪರಿವರ್ತಿಸುವುದರ ಜೊತೆಗೆ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಪ್ರಯತ್ನವೂ ನಡೆಯುತ್ತಿದೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಯಾವುದೇ ಜಾತಿ, ಸಮುದಾಯ ಅಥವಾ ಕುಟುಂಬಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಸಮಾಜದ ಎಲ್ಲ ವರ್ಗದ ಜನರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ ಎಂದು ಹೇಳಿದರು.
ಅವರ ಸುಖದಲ್ಲಿ ಸಂತೋಷಪಡುವುದು, ಕಷ್ಟದಲ್ಲಿ ಜೊತೆಯಾಗಿ ನಿಲ್ಲುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅವರ ಆರೋಗ್ಯ ವೃದ್ಧಿಸಿ, ನೂರು ಕಾಲ ಬಾಳುವಂತಾಗಲಿ ಹಾಗೂ ಅವರ ಮಾರ್ಗದರ್ಶನ ಸಮಾಜಕ್ಕೆ ನಿರಂತರವಾಗಿ ದೊರೆಯಲಿ ಎಂದು ಹಾರೈಸಿದರು.

ಈ ವೇಳೆ ಮಾತನಾಡಿದ ಡಾ. ಎಂ.ಎನ್. ರಾಜೇಂದ್ರ ಕುಮಾರ್, ತಮ್ಮ ಆರೋಗ್ಯ ಸುಧಾರಣೆಗಾಗಿ ಪ್ರಾರ್ಥಿಸಿದ ಎಲ್ಲ ಹಿತೈಷಿಗಳಿಗೆ, ಚಿಕಿತ್ಸೆ ನೀಡಿದ ವೈದ್ಯರಿಗೆ ಹಾಗೂ ಆರೋಗ್ಯ ಸುಧಾರಣೆಗೆ ಶ್ರಮಿಸಿದ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಎಲ್ಲರ ಪ್ರೀತಿ, ಬೆಂಬಲ ಮತ್ತು ಹಾರೈಕೆಯಿಂದ ಮತ್ತೆ ಸಮಾಜದೊಂದಿಗೆ ಬೆರೆಯುವಂತಾಗಿದೆ. ತಮ್ಮ ಮೇಲಿನ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಭಾವುಕರಾಗಿ ಹೇಳಿದರು.
ಮುಂದಿನ ದಿನಗಳಲ್ಲಿಯೂ ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ನವೋದಯ ಸಂಘಟನೆಯನ್ನು ಇನ್ನಷ್ಟು ಬೆಳೆಸಲು ಶ್ರಮಿಸುವುದಾಗಿ ರಾಜೇಂದ್ರ ಕುಮಾರ್ ತಿಳಿಸಿದರು.

ತಿರುಪತಿಗೆ ₹1 ಕೋಟಿ ನೀಡುವುದಾಗಿ ಘೋಷಿಸಿದ ಅವರು ಜಿಲ್ಲೆಯ ಎಲ್ಲ ದೇವಸ್ಥಾನಗಳು ಮತ್ತು ದೈವಸ್ಥಾನಗಳಿಗೆ ತಮ್ಮಿಂದ ಸಾಧ್ಯವಾದ ನೆರವು ನೀಡುವುದಾಗಿ ಹೇಳಿದರು. ಸಂಕಷ್ಟ ಎದುರಿಸುವ ಬಡ ಮಹಿಳೆಯರಿಗೆ ನೆರವಾಗುವ ಉದ್ದೇಶದಿಂದ ನವೋದಯದಲ್ಲಿ ₹1 ಕೋಟಿ ಮೀಸಲಿಡುವುದಾಗಿಯೂ ತಿಳಿಸಿದರು.
ಕಾರ್ಕಳದ ಮಹಾಮಸ್ತಕಾಭಿಷೇಕಕ್ಕೆ ₹50 ಲಕ್ಷ ನೀಡುವುದಾಗಿ ಘೋಷಿಸಿದ ಅವರು, ಮುಂದಿನ ದಿನಗಳಲ್ಲಿಯೂ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವುದಾಗಿ, ಹಾಗೂ ಸಹಕಾರಿ ಕ್ಷೇತ್ರದ ಅಭಿವೃದ್ಧಿ ಹಾಗೂ ಜನಸೇವೆಗೆ ತಮ್ಮ ಬದ್ಧತೆಯನ್ನು ಮುಂದುವರಿಸುವುದಾಗಿ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕೆಎಂಎಫ್ ನಿರ್ದೇಶಕ ರವಿರಾಜ್ ಹೆಗ್ಡೆ, ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಬೆಳ್ಳಿ ಪ್ರಕಾಶ್, ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಭಾಸ್ಕರ್ ಹೆಗ್ಡೆ ಹಾಗೂ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಿನಾಥ್ ಭಟ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಬೊಳ್ಳೆಟ್ಟು ಶಶಿಕುಮಾರ್ ರೈ ವಂದಿಸಿದರು. ಪತ್ರಕರ್ತ ಕೆ.ಸಿ. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *