ದಕ್ಷಿಣಕನ್ನಡ

ನವೆಂಬರ್ 03 ರಿಂದ 15 ರವರೆಗೆ ಮಂಗಳೂರಿನ ಪುರಭವನದಲ್ಲಿ “ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನ”

1986 ರಲ್ಲಿ ಆರಂಭವಾದ ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ತನ್ನ 40ನೇ ವರ್ಷಾಚರಣೆಯ ಮಾಣಿಕ್ಯೋತ್ಸವವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ವಿಶ್ವದ ಮೂಲೆಗಳಿಂದ ಕೊಂಕಣಿ ಸಮುದಾಯಗಳ ಜನರನ್ನು ಒಗ್ಗೂಡಿಸಿ, ಅದ್ಭುತ ಸಂಗೀತ ಕಾರ್ಯಕ್ರಮ ಸಂಯೋಜಿಸಿ, ಕೊಂಕಣಿ ಪತಾಕೆಯನ್ನು ಜಗದೆತ್ತರಕ್ಕೆ ಹಾರಿಸಿ, ಕೊಂಕಣಿ ಜನಮಾನಸದಲ್ಲಿ ಕೊಂಕಣಿ ಅಭಿಮಾನ ಬೆಳೆಸುವ ಮತ್ತು ಸಂಗೀತದ ಮುಖಾಂತರ ಕೊಂಕಣಿಯ ಶ್ರೀಮಂತ ಪರಂಪರೆಯನ್ನು ಸಂಭ್ರಮಿಸುವ ಉದ್ದೇಶದೊಡನೆ, 2026 ನವೆಂಬರ್ 03 ರಿಂದ 15 ರವರೆಗೆ, ಮಂಗಳೂರಿನ ಪುರಭವನದಲ್ಲಿ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನವನ್ನು ಆಯೋಜಿಸಲಾಗಿದೆ. ಕೊಂಕಣಿಯ ಎಲ್ಲಾ ಕ್ಷೇತ್ರಗಳಿಗೆ ಪ್ರಮುಖವಾಗಿ ಕೊಂಕಣಿ ಸಂಗೀತಕ್ಕೆ ಮೇರು ಕೊಡುಗೆ ನೀಡಿದ ಮಾಂಡ್ ಸೊಭಾಣ್ ಗುರಿಕಾರ ದಿ. ಎರಿಕ್ ಒಝೇರಿಯೊ ಅವರ ಗೌರವಾರ್ಥ ನಡೆಯುವ ಈ ಮಹಾ ಸಮ್ಮೇಳನದಲ್ಲಿ ವಿವಿಧ ಕಾರ್ಯಕ್ರಮಗಳು ಸಂಯೋಜನೆಗೊಂಡಿವೆ.
ಈ ಮಹಾ ಸಮ್ಮೇಳನವನ್ನು ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ 03.11.2026 ರಂದು ಬೆಳಿಗ್ಗೆ 5.00 ಗಂಟೆಗೆ ಪುರಭವನದಲ್ಲಿ ಉದ್ಘಾಟಿಸಲಿರುವರು. ಮಂಗಳೂರು ಬಿಷಪ್ ಅ.ವಂ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಆಶೀರ್ವಚನ ನೀಡಲಿರುವರು. ಸ್ವಾಗತ ಸಮಿತಿ ಅಧ್ಯಕ್ಷ ಡಾ. ರೊನಾಲ್ಡ್ ಕುಲಾಸೊ ಅಧ್ಯಕ್ಷತೆ ವಹಿಸುವರು.

03.11.2026 ಮುಂಜಾನೆ 6.00 ಗಂಟೆಯಿಂದ ಮುಂದಿನ 12 ದಿನ, 12 ಗಂಟೆ ಹಾಗೂ 12 ನಿಮಿಷಗಳ, ಅತೀ ದೀರ್ಘ ಅವಧಿಯ, ಸಮೂಹ ಗಾಯನದ ಗಿನ್ನೆಸ್ ದಾಖಲೆಯನ್ನು ರಚಿಸಲು ಪ್ರಯತ್ನಿಸಲಾಗುವುದು. “ಕೊಂಕಣಿ ನಿರಂತರಿ – ಸಂಸಾರ್ ಸರಾಸರಿ” (ಕೊಂಕಣಿ ನಿರಂತರವಾಗಿರಲಿ – ಜಗದ ಕೊನೆತನಕ ಉಳಿಯಲಿ) ಹೆಸರಿನ ಈ ಪ್ರಯತ್ನದಲ್ಲಿ ಭಾರತ, ಆಸ್ಟ್ರೇಲಿಯಾ, ಕುವೇಯ್ಟ್, ಓಮನ್, ಖತಾರ್ ದೇಶಗಳಿಂದ ಕ್ರೈಸ್ತ-ಹಿಂದೂ-ಮುಸ್ಲಿಮ್-ಧರ್ಮಗಳಿಗೆ ಸೇರಿದ ಕ್ರೈಸ್ತ, ಜಿ. ಎಸ್. ಬಿ., ಕುಡಾಲ್ ದೇಶಸ್ಥ, ಖಾರ್ವಿ, ಕುಡುಮಿ, ಸಿದ್ದಿ, ನವಾಯತಿ, ಸಿರಿಯನ್ ಕ್ರೈಸ್ತ ಇತ್ಯಾದಿ ವಿವಿಧ ಕೊಂಕಣಿ ಜನಸಮುದಾಯಗಳು ಹಾಗೂ ಇತರೆ ಭಾಷಿಕ ಜನರು ಭಾಗವಹಿಸಲಿರುವರು. 6789+ ಗಾಯಕರು, 250+ ಸಂಗೀತ ಸಂಯೋಜಕರು ರಚಿಸಿದ, ವಿವಿಧ ಭಾಷಾ ಪ್ರಬೇಧಗಳ 4500+ ಕೊಂಕಣಿ ಹಾಡುಗಳನ್ನು ಹಾಡಲಿರುವರು. ಒಟ್ಟು 300 ತಂಡಗಳು ತಲಾ ಒಂದು ಗಂಟೆ ಹಾಡಿ ಈ ದಾಖಲೆಗೆ ಪ್ರಯತ್ನಿಸಲಿರುವರು. ಇಲ್ಲಿ ಯಾವುದೇ ಹಾಡುಗಾರ ಪುನರಾವರ್ತಿತವಾಗುವುದಿಲ್ಲ. “ಸಂಗೀತ ಗುರು” ಜೊಯೆಲ್ ಪಿರೇರಾ ಈ ದಾಖಲೆಯ ಪ್ರಧಾನ ಸಂಗೀತ ನಿರ್ದೇಶಕರಾಗಿದ್ದಾರೆ. ಈಗಾಗಲೇ ಗಿನ್ನೆಸ್ ದಾಖಲೆ ಬಗ್ಗೆ ಲಂಡನ್ನಿನ ಕಛೇರಿಯಲ್ಲಿ ನೋಂದಣಿ ಮಾಡಿಕೊಂಡಿದ್ದು, ಅಧಿಕೃತ ಹಿರಿಯ ತೀರ್ಪುಗಾರರು ಭಾಗವಹಿಸಲಿದ್ದಾರೆ.

ಈ ಸಂಭ್ರಮಕ್ಕೆ ಶೈಕ್ಷಣಿಕ ಮೆರುಗು ಹಾಗೂ ಅಂತರಾಷ್ಟ್ರೀಯ ಆಯಾಮ ನೀಡಲು 12 ವಿಚಾರ ಗೋಷ್ಟಿಗಳನ್ನು ಆಯೋಜಿಸಲಾಗಿದೆ. ಕೊಂಕಣಿ ಭಕ್ತಿ ಸಂಗೀತ – ಗೋವಾ (ಫಾ. ಒನೆಸಿಸ್ ಡಿಕ್ರೂಜ್), ಕೊಂಕಣಿ ಭಕ್ತಿ ಸಂಗೀತ – ಮಂಗಳೂರು ಮತ್ತು ಇತರೆಡೆ (ಫಾ ಜಯಪ್ರಕಾಶ್ ಡಿಸೋಜ), ಕೊಂಕಣಿ ಜನಪದ ಸಂಗೀತ – ಗೋವಾ (ಡಾ. ಕೊಸ್ಮೊ ಫೆರ್ನಾಂಡಿಸ್), ಕೊಂಕಣಿ ಜನಪದ ಸಂಗೀತ – ಮಂಗಳೂರು ಮತ್ತು ಇತರೆಡೆ (ಡಾ. ಪ್ರೀತಿ ಕೀರ್ತಿ ಡಿಸೋಜ), ಆರೋಗ್ಯಕ್ಕಾಗಿ ಸಂಗೀತ (ಅಂಕುಶ್ ನಾಯಕ್), ಅಂತರರಾಷ್ಟ್ರೀಯ ಸಂಗೀತ (ಡಾ. ಪಾವ್ಲೊ ಪಚಿಯೊಲಾ), ಬಾಯ್ಲಾ ಸಂಗೀತ (ಆಲ್ವಿನ್ ಫೆರ್ನಾಂಡಿಸ್), ಸಂಗೀತಗಾರರು ಮತ್ತು ಅವರ ರಚನೆಗಳು (ನೀತಾ ರೆಬೆಲ್ಲೊ), ರಂಗಭೂಮಿ ಮತ್ತು ಸಿನೆಮಾ ಸಂಗೀತ (ಕ್ಯಾಜಿಟನ್ ಡಾಯಸ್), ಮಾಂಡ್ ಸೊಭಾಣ್ ಸಂಗೀತದ ಪ್ರಭಾವ (ವಂ. ಡಾ. ಆಲ್ವಿನ್ ಸೆರಾವೊ), ಬೌದ್ಧಿಕ ಆಸ್ತಿ ಹಕ್ಕುಗಳು (ಡಾ. ಸಾಯೊನಾರಾ ಟೆಲ್ಲೆಸ್), ಯಾಂತ್ರಿಕ ಬುದ್ದಿಮತ್ತೆ ಮತ್ತು ಸಂಗೀತ (ವಂ. ಡಾ. ವಿಕ್ಟರ್ ಫೆರಾವೊ) ಪ್ರಬಂಧ ಮಂಡಿಸಲಿದ್ದಾರೆ.

ಕೊಂಕಣಿ ಸಂಗೀತಕ್ಕೆ ಮಹತ್ತರ ಕೊಡುಗೆ ನೀಡಿದ 12 ಹಿರಿಯ ಸಂಗೀತಗಾರರಿಗೆ “ವಿಶ್ವ ಕೊಂಕಣಿ ಸಂಗೀತ ಸಾಧನಾ ಪುರಸ್ಕಾರ” ನೀಡಿ ಗೌರವಿಸಲಾಗುವುದು. ಅವರಲ್ಲಿ 5 ಜನರಿಗೆ ಮರಣೋತ್ತರವಾಗಿ ಈ ಗೌರವ ನೀಡಲಾಗುವುದು. ದಿ. ಕ್ರಿಸ್ ಪೆರಿ ಗೋವಾ, ಲಾರೆನ್ಸ್ ಸಲ್ಡಾನ್ಹಾ ಮುಂಬಯಿ, ಫಾ. ಲಿನೊ ಡೆಸಾ ಗೋವಾ, ದಿ. ವಸಂತಿ ಆರ್ ನಾಯಕ್ ಮಂಗಳೂರು, ದಿ. ಆಲ್ಫ್ರೆಡ್ ರೋಸ್ ಗೋವಾ, ಶ್ರೀಧರ್ ಖಾರ್ವಿ ಭಟ್ಕಳ, ಮೆಲ್ವಿನ್ ಪೆರಿಸ್ ಮಂಗಳೂರು, ನೇಮಿರಾಜ ಗೌಡ ಕೊಂಪದವು-ದಕ್ಷಿಣ ಕನ್ನಡ, ದಿ. ಜೆರೊಮ್ ಡಿಸೋಜ ಮುಂಬಯಿ, ಮಾಮ್ದು ಇಬ್ರಾಹಿಮ್ ಶೀರೂರು, ದಿ. ಉಲ್ಲಾಸ್ ಬುಯಾಂವ್ ಗೋವಾ ಮತ್ತು ಜುಲಿಯಾನ ಸಿದ್ದಿ ಹಳಿಯಾಳ ಇವರನ್ನು ರಾಜಕೀಯ, ಸಾಂಸ್ಕೃತಿಕ ಕ್ಷೇತ್ರದ ಗಣ್ಯರು ಸನ್ಮಾನಿಸುವರು.

ಫುಲ್ ಫುಲೊತಾ: ಸಮ್ಮೇಳನದಲ್ಲಿ 10-16 ಹರೆಯದ ಮಕ್ಕಳನ್ನೂ ಒಳಗೊಳ್ಳಬೇಕೆಂಬ ಆಶಯದೊಡನೆ “ಫುಲ್ ಫುಲೊತಾ” (ಹೂವು ಅರಳುತ್ತಿದೆ) ಎಂಬ ಕೊಂಕಣಿ ನಿರಂತರಿ ಶೈಲಿಯ ಸಂಗೀತ ಸಂಜೆ, ನವೆಂಬರ್ 13 ರಂದು ಪುರಭವನದ ಎದುರುಗಡೆ ಇರುವ ರಾಜಾಜಿ ಪಾರ್ಕಿನ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ.
ಪುರಭವನದ ಹೊರಾಂಗಣದಲ್ಲಿ ಕೊಂಕಣಿ ಸಂಗೀತದ ಬಗ್ಗೆ ಮಾಹಿತಿ ನೀಡುವ, ಕೊಂಕಣಿ ಜನ ಜೀವನ, ಸಂಸ್ಕೃತಿ ಬಿಂಬಿಸುವ ವಸ್ತು ಪ್ರದರ್ಶನ ನಡೆಯಲಿದೆ
ಇಲ್ಲಿ ಕೊಂಕಣಿ ಸಂಗೀತಕ್ಕೆ ಹಿರಿಮೆ ತಂದುಕೊಟ್ಟ ಹಿರಿ-ಕಿರಿಯ ಸಂಗೀತಗಾರರ ಬಗ್ಗೆ ಮಾಹಿತಿ ಮತ್ತು ಕೊಂಕಣಿಯ ವಿವಿಧ ಸಮುದಾಯಗಳ ಖಾದ್ಯ ವೈವಿಧ್ಯಗಳ ಮಾರಾಟ ಮಳಿಗೆಗಳು ಇರಲಿವೆ.

ನವೆಂಬರ್ 15 ರಂದು ಸಂಜೆ 6.12 ಕ್ಕೆ ಗಿನ್ನೆಸ್ ದಾಖಲೆಯ ಗಾಯನ ಅಂತ್ಯವಾಗಲಿದ್ದು, ನಂತರ ಸಭಾ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮಾರೋಪದಲ್ಲಿ ಭಾಗವಹಿಸಲಿದ್ದಾರೆ.

31.08.25 ರಂದು ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ಅವರ ಅಂತ್ಯಕ್ರಿಯೆಯ ದಿನ ಈ ದಾಖಲೆಯ ಬಗ್ಗೆ ಸಾರ್ವಜನಿಕ ಘೋಷಣೆ ಮಾಡಲಾಗಿದ್ದು, ನಂತರ ಭರದ ತಯಾರಿ ನಡೆದಿದೆ. ಸಾವಿರಾರು ಹಾಡುಗಳ ಸಂಗ್ರಹ, ಅವುಗಳ ಸಾಹಿತ್ಯದ ದಾಖಲೀಕರಣ, 300 ತಂಡಗಳ ರಚನೆ ಮತ್ತು ಹಾಡುಗಳ ಹಂಚುವಿಕೆ, ತಂಡಗಳು ಅಂತಿಮ ಮಾಡಿ ನೀಡಿದ ಹಾಡುಗಳ ಮೈನಸ್ ಟ್ರ್ಯಾಕ್ ಮಾಡಿ ಕೊಡುವ ಕೆಲಸ, ಪೂರ್ವಾಭ್ಯಾಸವನ್ನು ಮೇಲ್ವಿಚಾರಣೆ ನಡೆಸಲು 40 ಜನ ಸಹಾಯಕ ಸಂಗೀತ ನಿರ್ದೇಶಕರ ನೇಮಕ, ಅಭ್ಯಾಸದ ಹಾಜರಾತಿಯ ದಾಖಲಾತಿ, ತಂಡಗಳ ಎಲ್ಲಾ ಸದಸ್ಯರುಗಳ ಘೋಷಣಾ ಪತ್ರ ದಾಖಲೀಕರಣ, ತಂಡಗಳಿಗೆ ವಸತಿ, ಪ್ರಯಾಣ ಮತ್ತು ಊಟೋಪಚಾರದ ವ್ಯವಸ್ಥೆ, ಸ್ವಯಂ ಸೇವಕರಿಗೆ ಮಾಹಿತಿ ಮತ್ತು ತರಬೇತಿ ಈ ರೀತಿ ಇಡೀ ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಬೇಕಾದ ಸಂಪೂರ್ಣ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಮಾಂಡ್ ಸೊಭಾಣ್ ಅಧ್ಯಕ್ಷರು ಲುವಿ ಜೆ. ಪಿಂಟೊ, ಪ್ರ.ವಿ.ಕೊಂ.ಸಂ.ಮ ಆರ್ಥಿಕ ಸಮಿತಿ ಅಧ್ಯಕ್ಷರು ರೊಯ್ ಕ್ಯಾಸ್ತೆಲಿನೊ, ಪ್ರ.ವಿ.ಕೊಂ.ಸಂ.ಮ ಪ್ರಧಾನ ಸಂಗೀತ ನಿರ್ದೇಶಕ ಜೊಯೆಲ್ ಪಿರೇರಾ, ಮಾಂಡ್ ಸೊಭಾಣ್ ಸಂಘಟಕರು ಜೋಕಿಂ ಸ್ಟ್ಯಾನಿ ಆಲ್ವಾರಿಸ್, ಮಾಂಡ್ ಸೊಭಾಣ್ ಕಾರ್ಯದರ್ಶಿ ರೊನಾಲ್ಡ್ ಕ್ರಾಸ್ತಾ, ಪ್ರ.ವಿ.ಕೊಂ.ಸಂ.ಮ ಗೋವಾ ಸಂಯೋಜಕರು, ಮೈಕಲ್ ಜೂಡ್ ಗ್ರೇಶಿಯಸ್ ಪತ್ರಿಕಾ ಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *