ದಕ್ಷಿಣಕನ್ನಡ

ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಹಿತ್ಯ ಸಂಗೀತ ಸಂಭ್ರಮ ಕಾರ್ಯಕ್ರಮ.

ಪದಾಧಿಕಾರಿ ರತ್ನಾವತಿ ಜೆ ಬೈಕಾಡಿ ಸುಮಧುರವಾದ ನಾಡಭಕ್ತಿಯ ಗೀತೆಗಳನ್ನು ಹಾಡಿದರು. ಬೆನೆಟ್ ಅಮ್ಮನ್ನ ಕನ್ನಡ ಪತ್ರಿಕೆ ಗ್ರಂಥ ಸಂಪಾದನೆ ಮತ್ತು ಮುದ್ರಣ ಇತಿಹಾಸದ ಮೇಲೆ ಬೆಳಕು ಚೆಲ್ಲಿದರು. ಡಾ । ಮೀನಾಕ್ಷಿ ರಾಮಚಂದ್ರ, “ದಕ್ಷಿಣ ಕನ್ನಡದಲ್ಲಿ ಕನ್ನಡ ಇಂದು” ಎಂಬ ಬಗ್ಗೆ ಮಾತನಾಡಿದರು.

ರಘು ಇಡ್ಕಿದು, ಸುಬ್ರಾಯ ಭಟ್, ಗಣೇಶಪ್ರಸಾದ್ ಜೀ, ಸುಖಲಾಕ್ಷಿ ಸುವರ್ಣ, ಕೃಷ್ಣಪ್ಪ ನಾಯ್ಕ್, ಸನತ್ ಕುಮಾರ್ ಜೈನ್, ರವೀಂದ್ರನಾಥ್ ನಾಡು ನುಡಿಯ ಬಗ್ಗೆ ಅಭಿಮಾನದ ಮಾತುಗಳೊಂದಿಗೆ ಹಾಡು, ಕವನ, ಚುಟುಕು ವಾಚನದ ಮೂಲಕ ಸಾಹಿತ್ಯಾಸಕ್ತರನ್ನು ರಂಜಿಸಿದರು.

ಪ್ರತಿ ವರುಷ ನವೆಂಬರ್ ೧ರಂದು ಕರ್ನಾಟಕ ರಾಜ್ಯೋತ್ಸವ ಅಥವಾ ಕನ್ನಡ ರಾಜ್ಯೋತ್ಸವವನ್ನು ನಾಡಹಬ್ಬದಂತೆ ಆಚರಿಸಲಾಗುತ್ತದೆ. ನಮ್ಮ ಈಗಿನ ಕರ್ನಾಟಕ ಮೊದಲು ಮೈಸೂರು ರಾಜ್ಯ ಎಂದು ನಾಮಕರಣಗೊಂಡಿತ್ತು. ೧೯೫೬ ನವೆಂಬರ್ ಒಂದರಂದು ಮೈಸೂರು ರಾಜ್ಯ ಉದಯಿಸಿತು. ಇದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನಾಗಿ ಪೋಷಣೆ ಮಾಡಿದ ಈ ದಿನವನ್ನು ರಾಜ್ಯಾದ್ಯಂತ ಕನ್ನಡಿಗರು ಜಾತಿ, ಮತ, ಧರ್ಮಗಳ ಬೇಧವಿಲ್ಲದೆ ನಾಡಹಬ್ಬದಂತೆ ಆಚರಿಸುತ್ತಾರೆ.

ಎಲ್ಲಾ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಟ್ಟುಗೂಡಿಸಬೇಕು ಎಂಬ ಹಿನ್ನೆಲೆಯು ಸ್ವಾತಂತ್ರಕ್ಕೂ ಮೊದಲು ೧೯೦೫ರಲ್ಲಿಯೇ ಕನ್ನಡ ಏಕೀಕರಣ ಚಳವಳಿ ಆರಂಭವಾಗಿತ್ತು. ಇದಕ್ಕೆ ಕನ್ನಡದ ಕುಲಪುರೋಹಿತರೆಂದೇ ಪ್ರಖ್ಯಾತರಾಗಿದ್ದ ಆಲೂರು ವೆಂಕಟರಾಯರು ಪ್ರಮುಖ ಕಾರಣರಾಗಿದ್ದರು. ಸ್ವಾತಂತ್ರ್ಯ ನಂತರದ ದಿನಗಳಲ್ಲಿ, ೧೯೫೬ ನವೆಂಬರ್ ಒಂದರಂದು “ರಾಜ್ಯಗಳ ಪುನರ್‌ವಿಂಗಡಣಾ ಕಾಯಿದೆ”ಯನ್ವಯ ಕನ್ನಡ ಮಾತನಾಡುವ ಮದ್ರಾಸ್, ಬಾಂಬೆ, ಹೈದರಾಬಾದ್ ಮತ್ತು ಕೊಡಗು ಪ್ರಾಂತಗಳ ಕನ್ನಡ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಅನುಷ್ಠಾನಕ್ಕೆ ಬಂದಿತು.ನಂತರದ ದಿನಗಳಲ್ಲಿ ಮೈಸೂರು ರಾಜ್ಯದ ಬದಲಾಗಿ “ಕರ್ನಾಟಕ” ಎಂದು ಮರುನಾಮಕರಣವಾಗಬೇಕೆಂಬ ಕೂಗು ಜೋರಾಗಿ ಸಾಕಷ್ಟು ಹೋರಾಟಗಳು ನಡೆದವು. ಇವೆಲ್ಲದರ ಪರಿಣಾಮವಾಗಿ ೧೯೭೩ರ ನವೆಂಬರ್ ೧ರಂದು ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಡಿ. ದೇವರಾಜ ಅರಸು ಅವರ ನೇತೃತ್ವದಲ್ಲಿ ಮೈಸೂರು ರಾಜ್ಯವನ್ನು ಅಧಿಕೃತವಾಗಿ “ಕರ್ನಾಟಕ” ಎಂದು ಮರುನಾಮಕರಣ ಮಾಡಲಾಯಿತು.

ಕ.ಸಾ.ಪ. ಮಂಗಳೂರು ಘಟಕದ ಡಾ. ಮಂಜುನಾಥ ರೇವಣಕರ್ ಅಧ್ಯಕ್ಷತೆ ವಹಿಸಿ ರಾಜ್ಯೋತ್ಸವ ಸಂದೇಶ ನೀಡಿದರು. ಪ್ರಧಾನ ಕಾರ್ಯದರ್ಶಿ ಡಾ. ಮುರಲಿಮೋಹನ ಚೂಂತಾರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕೋಶಾಧಿಕಾರಿ ಸುಬ್ರಾಯ ಭಟ್ ನಿರೂಪಿಸಿದರು. ಕಾರ್ಯದರ್ಶಿ ಗಣೇಶಪ್ರಸಾದ್ ಜೀ ವಂದಿಸಿದರು.

Leave a Reply

Your email address will not be published. Required fields are marked *