ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರವಾಸಿ ಕಾರು ಚಾಲಕರು ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಅಥವಾ ಬಿಡಲು ವಿಮಾನ ನಿಲ್ದಾಣದ ಒಳಗಡೆ ಪ್ರವೇಶಿಸಿ ಹಿಂದಿರುಗುವ ಸಂದರ್ಭದಲ್ಲಿ ರೂ.50 ಶುಲ್ಕ ವಸೂಲಿ ಮಾಡುತ್ತಿರುವ ಕ್ರಮವನ್ನು ವಿಧಾನ ಪರಿಷತ್ ಸದಸ್ಯರಾದ ಶ್ರೀ ಐವನ್ ಡಿʼಸೋಜಾ ಅವರು ತೀವ್ರವಾಗಿ ವಿರೋಧಿಸಿದ್ದಾರೆ.


ಈ ಕುರಿತು ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಖಾಸಗಿ ವಾಹನಗಳಿಗೆ ಇಲ್ಲದ ಈ ಶುಲ್ಕವನ್ನು ಕೇವಲ ಪ್ರವಾಸಿ ಕಾರು ಚಾಲಕರಿಂದ ಮಾತ್ರ ವಸೂಲಿ ಮಾಡುತ್ತಿರುವುದು ತಾರತಮ್ಯದಿಂದ ಕೂಡಿದ ಹಾಗೂ ಅಸಮಂಜಸ ಕ್ರಮವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಂತಹ ಶುಲ್ಕದ ವ್ಯವಸ್ಥೆ ಇಲ್ಲದಿರುವಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತ್ರ ಈ ರೀತಿಯ ನಿಯಮ ಜಾರಿಗೊಳಿಸಿರುವುದೇಕೆ ಎಂದು ಪ್ರಶ್ನಿಸಿದರು.ಪ್ರತಿಬಾರಿ ರೂ.50 ಶುಲ್ಕ ವಸೂಲಿ ಮಾಡುವುದು ಕಾರು ಚಾಲಕರ ಮೇಲೆ ಅನಗತ್ಯ ಆರ್ಥಿಕ ಹೊರೆ ಹಾಕಿದಂತಾಗಿದೆ. ಇದೊಂದು ರೀತಿಯಲ್ಲಿ ಚಾಲಕರ ಜೇಬಿಗೆ ಕತ್ತರಿ ಹಾಕುವ ಕ್ರಮವಾಗಿದೆ.ಆದ್ದರಿಂದ ಈ ಶುಲ್ಕವನ್ನು ಕೂಡಲೇ ರದ್ದುಗೊಳಿಸಬೇಕು. ಇಲ್ಲದಿದ್ದಲ್ಲಿ ಕಾರು ಚಾಲಕರೊಂದಿಗೆ ಸೇರಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ಅದಾನಿ ಸಂಸ್ಥೆಯ Executive Director ಶ್ರೀ ಕಿಶೋರ್ ಅಳ್ವ ಅವರು ಮಾತನಾಡಿ,
ಈ ಸಮಸ್ಯೆಯನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸ್ಥಳೀಯ ಪ್ರವಾಸಿ ಕಾರು ಚಾಲಕರು ವಿಮಾನ ನಿಲ್ದಾಣದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ಆಡಳಿತದ ಕರ್ತವ್ಯವಾಗಿದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಚಾಲಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳು, ವಾಹನ ಪ್ರವೇಶ ಮತ್ತು ಡ್ರಾಪ್ ಶುಲ್ಕ, ಪಾರ್ಕಿಂಗ್ ಶುಲ್ಕದ ಹೆಚ್ಚಳ ಹಾಗೂ ಮೂಲಭೂತ ಸೌಲಭ್ಯಗಳ ಕುರಿತು ಚರ್ಚಿಸಿ, ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಮನವಿ ಮಾಡಲಾಯಿತು.

