ದಕ್ಷಿಣಕನ್ನಡ

ಮೂಡುಬಿದಿರೆಯ ಪುತ್ತಿಗೆ ಹಾಗೂ ಹೊಸಬೆಟ್ಟು ಗ್ರಾಮಗಳಲ್ಲಿ “ನಮ್ಮ ಹಕ್ಕು ನಮಗೆ ನೀಡಿ” ಬೃಹತ್ ಹಕ್ಕೊತ್ತಾಯ ಸಭೆ – ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತೀವ್ರ ವಾಗ್ದಾಳಿ.

ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದಲೂ ಸರಣಿ ಹಗರಣಗಳಲ್ಲಿ ಮುಳುಗಿದ್ದು ಗ್ರಾಮ ಪಂಚಾಯಿತಿಗಳ ಅನುದಾನ ಕಸಿದುಕೊಂಡು ಬೆಲೆ ಏರಿಕೆ ಹಾಗೂ ತೆರಿಗೆ ಹೆಚ್ಚಳದ ಮೂಲಕ ಬಡವರ ರಕ್ತ ಹೀರುವ ಕೆಲಸ ಮಾಡುತ್ತಿದೆ ಎಂದು ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಹಾಗೂ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ್ ಕುಂಪಲ ಜಂಟಿಯಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತೀಯ ಜನತಾ ಪಾರ್ಟಿ ಮುಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಪುತ್ತಿಗೆ ಹಾಗೂ ಹೊಸಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು ಮತ್ತು ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯದ ವಿರುದ್ಧ ಹಮ್ಮಿಕೊಳ್ಳಲಾಗಿದ್ದ “ನಮ್ಮ ಹಕ್ಕಿಗಾಗಿ ನಮ್ಮ ಹೋರಾಟ – ನಮ್ಮ ಹಕ್ಕು ನಮಗೆ ನೀಡಿ” ಜನಾಂದೋಲನದ ಬೃಹತ್ ಹಕ್ಕೊತ್ತಾಯ ಸಭೆಗಳಲ್ಲಿ ಇಬ್ಬರೂ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಪಂಚ ಗ್ಯಾರಂಟಿಗಳ ನೆಪವೊಡ್ಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಮೊದಲ ದಿನದಿಂದಲೇ ಹಗರಣಗಳಲ್ಲಿ ಮುಳುಗಿದೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಸುಮಾರು 187 ಕೋಟಿ ರೂಪಾಯಿ ಬಡವರ ಹಣವನ್ನು ಲೂಟಿ ಮಾಡಿದೆ, ಮೂಡಾ ಹಗರಣ ಸೇರಿದಂತೆ ಭ್ರಷ್ಟಾಚಾರದ ಮೂಲಕ ರಾಜ್ಯದ ಖಜಾನೆಯನ್ನು ಸಂಪೂರ್ಣವಾಗಿ ಖಾಲಿ ಮಾಡಿದ್ದಾರೆ.
ನಾನು ವಿಧಾನ ಪರಿಷತ್ತಿನಲ್ಲಿ ಕೇಳಿದ ಪ್ರಶ್ನೆಗೆ ಸರ್ಕಾರ ನೀಡಿರುವ ಉತ್ತರದಂತೆ ರಾಜ್ಯದ ವಿವಿಧ ಇಲಾಖೆಗಳಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ದಕ್ಷಿಣ ಕನ್ನಡ ಜಿಲ್ಲೆಯ 200+ ಗ್ರಾಮ ಪಂಚಾಯಿತಿಗಳಲ್ಲೇ 300+ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಬಿದ್ದಿದ್ದು ಕನಿಷ್ಠ ಸಿಬ್ಬಂದಿಯಿಲ್ಲದೆ ಪಂಚಾಯಿತಿ ಆಡಳಿತ ಸಂಪೂರ್ಣ ಕುಸಿದುಬಿದ್ದಿದೆ, ಬಡವರು ಮನೆ ಕಟ್ಟಲು ಯೋಜನಾ ಪ್ರಾಧಿಕಾರದ ಕಚೇರಿಗಳಿಗೆ ಅಲೆದು 40-50 ಸಾವಿರ ರೂಪಾಯಿ ಲಂಚ ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಶಾಸಕ ಉಮಾನಾಥ ಕೋಟ್ಯಾನ್ ಅವರ ಮುತುವರ್ಜಿಯಿಂದ ನೂರಾರು ಮನೆಗಳು ಮಂಜೂರಾಗುತ್ತಿದ್ದವು ಆದರೆ ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಒಂದೇ ಒಂದು ಬಸವ ವಸತಿ ಅಥವಾ ಅಂಬೇಡ್ಕರ್ ಆವಾಸ್ ಯೋಜನೆಯ ಮನೆಯನ್ನು ಮಂಜೂರು ಮಾಡಿಲ್ಲ ಜಿಲ್ಲೆಯಲ್ಲಿ 13,200ಕ್ಕೂ ಹೆಚ್ಚು ಮಂದಿ ವಸತಿಗಾಗಿ ಹಾಗೂ 22,000ಕ್ಕೂ ಹೆಚ್ಚು ಮಂದಿ ನಿವೇಶನಕ್ಕಾಗಿ ಅರ್ಜಿ ಹಾಕಿ ಕಾಯುತ್ತಿದ್ದರೂ ಸರ್ಕಾರ ಕಿಂಚಿತ್ತೂ ಕ್ಯಾರೆ ಎನ್ನುತ್ತಿಲ್ಲ, ಯುವಕರಿಗೆ ಯುವನಿಧಿ ಹಣ ಸಿಗುತ್ತಿಲ್ಲ ಮಹಿಳೆಯರಿಗೆ ನೀಡಬೇಕಿದ್ದ ಗೃಹಲಕ್ಷ್ಮಿ ಯೋಜನೆಯ ಹಣ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಸ್ಥಗಿತಗೊಂಡಿದೆ, ವೃದ್ಧಾಪ್ಯ ವೇತನ ಮತ್ತು ವಿಧವಾ ವೇತನಕ್ಕೆ ಕತ್ತರಿ ಹಾಕಿ ಹಿರಿಯ ಜೀವಗಳು ಕಣ್ಣೀರಿಡುವಂತೆ ಮಾಡಿದ್ದಾರೆ. ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಜಲಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ ಯೋಜನೆಗಳ ಮೂಲಕ ಜನರಿಗೆ ನೆರವಾಗುತ್ತಿದ್ದರೆ ರಾಜ್ಯ ಸರ್ಕಾರ ಆ ಹಣದಲ್ಲೂ ಅವ್ಯವಹಾರ ನಡೆಸಿ ದಿವಾಳಿಯಾಗಿದೆ, ಈ ಜನವಿರೋಧಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ಪಂಚಾಯತ್ ಮಟ್ಟದ ನಮ್ಮ ಹೋರಾಟ
ಮುಂದುವರಿಯಲಿದೆ ಎಂದು ಎಚ್ಚರಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ್ ಕುಂಪಲ ಮಾತನಾಡಿ ಇಡೀ ಕರ್ನಾಟಕದ ಇತಿಹಾಸದಲ್ಲೇ ಹಿಂದೆಂದೂ ಕಾಣದ ರೀತಿಯಲ್ಲಿ ಹಾಲಿನ ದರವನ್ನು ಲೀಟರ್‌ಗೆ 8 ರೂಪಾಯಿ ಏರಿಸಿ ಜನಸಾಮಾನ್ಯರ ಮೇಲೆ ನೇರ ಬರೆ ಎಳೆಯಲಾಗಿದೆ, ಆಸ್ತಿ ನೋಂದಣಿ ಶುಲ್ಕವನ್ನು ಶೇಕಡಾ 40 ರಷ್ಟು ಹೆಚ್ಚಿಸಲು ಹೊರಟಿದ್ದು ಕೆಎಸ್‌ಆರ್‌ಟಿಸಿ ಬಸ್ ದರವನ್ನು ಪ್ರತಿ ಹಂತಕ್ಕೆ 4 ರೂಪಾಯಿ ಏರಿಸಲು ಸಿದ್ಧತೆ ನಡೆಸಿದ್ದಾರೆ, ಜನನ-ಮರಣ ಪ್ರಮಾಣಪತ್ರಗಳಿಗೂ ಶುಲ್ಕ ಹೆಚ್ಚಿಸಲಾಗಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರದ 6,000 ರೂಪಾಯಿ ಜೊತೆಗೆ ರಾಜ್ಯ ಸರ್ಕಾರ ನೀಡುತ್ತಿದ್ದ 4,000 ರೂಪಾಯಿ ಪ್ರೋತ್ಸಾಹಧನವನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ನಿಲ್ಲಿಸಿ ರೈತರಿಗೆ ದ್ರೋಹ ಬಗೆದಿದೆ, ಬಡವರ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಸಂಚು ನಡೆಸಲಾಗುತ್ತಿದೆ ಇಂದು ಗ್ರಾಮ ಪಂಚಾಯಿತಿಗಳಲ್ಲಿ ರಸ್ತೆ ದೀಪಗಳನ್ನು ಬೆಳಗಿಸಲೂ ಹಣವಿಲ್ಲದಂತಹ ದುಸ್ಥಿತಿ ತಂದಿಟ್ಟಿದ್ದಾರೆ ರಾಜ್ಯದಾದ್ಯಂತ ನಿರಂತರ ಲೋಡ್ ಶೆಡ್ಡಿಂಗ್ ಮೂಲಕ ಗ್ರಾಮೀಣ ಜನಜೀವನವನ್ನು ಅಸ್ತವ್ಯಸ್ತಗೊಳಿಸಲಾಗಿದೆ, ಸಂಪೂರ್ಣವಾಗಿ ದಿವಾಳಿಯಾಗಿರುವ ಈ ಸರ್ಕಾರಕ್ಕೆ ಗ್ರಾಮ ಪಂಚಾಯಿತಿಗಳ ಮೂಲಕವೇ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಗುಡುಗಿದರು.

ಸಭೆಗಳಲ್ಲಿ ಮುಲ್ಕಿ-ಮೂಡುಬಿದಿರೆ ಮಂಡಲದ ಅಧ್ಯಕ್ಷರಾದ ಶ್ರೀ ದಿನೇಶ್ ಪುತ್ರನ್, ಪ್ರಧಾನ ಕಾರ್ಯದರ್ಶಿ ಶ್ರೀ ರಂಜಿತ್ ಮೂಡುಬಿದಿರೆ, ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಸುನೀಲ್ ಆಳ್ವ, ಮುಖಂಡರಾದ ಶ್ರೀ ಈಶ್ವರ್ ಕಟೀಲ್ ಸೇರಿದಂತೆ ಪಕ್ಷದ ಪ್ರಮುಖರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *