ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ (ಎನ್ಎಂಪಿಎ) ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ರಾಜ್ಯೋತ್ಸವದ ಅಂಗವಾಗಿ ಶ್ರೀಮತಿ ಎಸ್. ಶಾಂತಿ ಅವರು ಗಣ್ಯರು, ಮಂಡಳಿ ಸದಸ್ಯರು, ಎನ್ಎಂಪಿಎ ಕನ್ನಡ ಸಂಘದ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಶಾಲಾ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ರಾಜ್ಯ ಧ್ವಜಾರೋಹಣ ನೆರವೇರಿಸಿದರು.


ಉಪಾಧ್ಯಕ್ಷರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಾಯಿ ಭುವನೇಶ್ವರಿಗೆ ಪುಷ್ಪನಮನ ಸಲ್ಲಿಸಲಾಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಪ್ರಕಾಶ್ ಪುತ್ತೂರು ಅವರು ಕನ್ನಡ ಭಾಷೆಯ ಮಹತ್ವ ಕರ್ನಾಟಕ ರಾಜ್ಯೋತ್ಸವದ ಆಚರಣೆಯ ಅಗತ್ಯತೆ ಹಾಗೂ ಈ ದಿನದ ಐತಿಹಾಸಿಕ ಹಿನ್ನೆಲೆಯ ಕುರಿತು ಮಾತನಾಡಿದರು. ಬಂದರಿನ ಸಮಸ್ತ ವರ್ಗದವರನ್ನು ಒಳಗೊಳ್ಳುವ ಮೂಲಕ ಎನ್ಎಂಪಿಎ ರಾಜ್ಯೋತ್ಸವವನ್ನು ಆಚರಿಸುತ್ತಿರುವ ರೀತಿಯನ್ನು ಅವರು ಶ್ಲಾಘಿಸಿದರು.

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶ್ರೀಮತಿ ಎಸ್. ಶಾಂತಿ ಅವರು ಕರ್ನಾಟಕ ಹಾಗೂ ಮಂಗಳೂರಿನ ಜನತೆ ತಮ್ಮ ಮೇಲೆ ತೋರಿದ ಆತ್ಮೀಯತೆ ಸಹಕಾರ ಮತ್ತು ಸೌಹಾರ್ದ ಮನೋಭಾವಕ್ಕೆ ಕೃತಜ್ಞತೆ ಸಲ್ಲಿಸಿದರು. ವಿವಿಧ ಹಿನ್ನೆಲೆಯ ಜನರನ್ನು ಸ್ವಾಗತಿಸಿ ಅವರ ಬೆಳವಣಿಗೆಗೆ ಅವಕಾಶ ಕಲ್ಪಿಸುವ ಕರ್ನಾಟಕದ ಗುಣವನ್ನು ಶ್ಲಾಘಿಸಿದ ಅವರು ವಿವಿಧ ರಾಜ್ಯಗಳಿಂದ ಬಂದಿರುವ ಉದ್ಯೋಗಿಗಳೂ ಎನ್ಎಂಪಿಎಯಲ್ಲಿ ಆತ್ಮೀಯ ಹಾಗೂ ಸೌಹಾರ್ದಯುತ ವಾತಾವರಣದಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ಉಲ್ಲೇಖಿಸಿದರು, ಕರ್ನಾಟಕದ ಪ್ರಗತಿಯು ಇತರ ರಾಜ್ಯಗಳ ಪ್ರಗತಿಯೊಂದಿಗೆ ಕೈಜೋಡಿಸಿದಾಗ ಮಾತ್ರ ರಾಷ್ಟ್ರದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು, ಕರ್ನಾಟಕದ ಹೊರಗಿನಿಂದ ಬಂದಿರುವ ಉದ್ಯೋಗಿಗಳು ಕನ್ನಡ ಭಾಷೆಯನ್ನು ಕಲಿಯುವಂತೆ ಪ್ರೋತ್ಸಾಹಿಸಿದ ಅವರು ಅವರಲ್ಲಿ ಆಸಕ್ತಿ ಮೂಡಿಸಲು ವಿಶೇಷ ಸ್ಪರ್ಧೆಗಳನ್ನು ಆಯೋಜಿಸುವ ಸಲಹೆಯನ್ನೂ ನೀಡಿದರು.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲರನ್ನೂ ಹಾಗೂ ಬಹುಮಾನ ವಿಜೇತರನ್ನು ಅಭಿನಂದಿಸಿದ ಅವರು ಮುಂದಿನ ವರ್ಷದ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡದಲ್ಲಿಯೇ ಕೆಲವು ಮಾತುಗಳನ್ನು ಆಡಲು ಪ್ರಯತ್ನಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅವರ ಶೈಕ್ಷಣಿಕ ಸಾಧನೆಗಾಗಿ ಸನ್ಮಾನಿಸಲಾಯಿತು.


ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕಳೆದ ಒಂದು ವಾರದಿಂದ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರಾಧಿಕಾರದ ಉದ್ಯೋಗಿಗಳು ಹಾಗೂ ಸಿಬ್ಬಂದಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕರ್ನಾಟಕ ರಾಜ್ಯೋತ್ಸವ ಆಚರಣಾ ಸಮಿತಿಯ ಸದಸ್ಯರಾದ ಡಾ. ಸುರೇಖಾ ಹೊಸಕೇರಿ ಅವರು ಗಣ್ಯರನ್ನು ಹಾಗೂ ಸಭಿಕರನ್ನು ಸ್ವಾಗತಿಸಿದರು. ಎನ್ಎಂಪಿಎ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಯಲ್ಲಪ್ಪ ವಡ್ಡರ್ ಅವರು ವಂದನಾರ್ಪಣೆ ಸಲ್ಲಿಸಿದರು. ಶಾಲಾ ವಿದ್ಯಾರ್ಥಿಗಳಿಂದ ನಡೆದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ರಾಜ್ಯೋತ್ಸವದ ಸಂಭ್ರಮಕ್ಕೆ ತೆರೆ ಬಿದ್ದಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್ಎಂಪಿಎ ಉಪಾಧ್ಯಕ್ಷರಾದ ಶ್ರೀಮತಿ ಎಸ್. ಶಾಂತಿ ಅವರು ವಹಿಸಿದ್ದರು, ಖ್ಯಾತ ಸಾಹಿತಿ ಹಾಗೂ ನಿರೂಪಕರಾದ ಶ್ರೀ ಪ್ರಕಾಶ್ ಪುತ್ತೂರು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಎನ್ಎಂಪಿಎ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಯಲ್ಲಪ್ಪ ವಡ್ಡರ್ ಹಾಗೂ ಪ್ರಾಧಿಕಾರದ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಸುರೇಖಾ ಹೊಸಕೇರಿ ಅವರು ಇತರ ಗಣ್ಯರಾಗಿ ಉಪಸ್ಥಿತರಿದ್ದರು.

