ಕಂಟೇನರ್ ಸರಕು ಸಾಗಣೆಯನ್ನು ಉತ್ತೇಜಿಸುವ ಹಾಗೂ ನವ ಮಂಗಳೂರು ಬಂದರಿನ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮಹತ್ವದ ಉಪಕ್ರಮವಾಗಿ ನವ ಮಂಗಳೂರು ಬಂದರು ಪ್ರಾಧಿಕಾರವು (NMPA) ಫೀಡರ್ ಮತ್ತು ಮೇನ್ಲೈನ್ ಕಂಟೇನರ್ ಹಡಗುಗಳಿಗೆ ವಿಧಿಸಲಾಗುವ ಹಡಗು ಸಂಬಂಧಿತ ಶುಲ್ಕಗಳಲ್ಲಿ (Vessel Related Charges – VRC) ಹೆಚ್ಚುವರಿ ರಿಯಾಯಿತಿಯನ್ನು ಘೋಷಿಸಿದೆ.

ಕಂಟೇನರ್ ಸರಕು ಸಾಗಣೆಯ ಬೆಳವಣಿಗೆಗೆ ಅನುಕೂಲ ಕಲ್ಪಿಸುವುದು ಹಾಗೂ ನೆರೆಯ ಬಂದರುಗಳೊಂದಿಗೆ ಸ್ಪರ್ಧಾತ್ಮಕ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ NMPA ಕೆಳಕಂಡ ರಿಯಾಯಿತಿಗಳನ್ನು ಘೋಷಿಸಿದೆ.
1 ಫೀಡರ್ ಲೈನ್ ಕಂಟೇನರ್ ಹಡಗುಗಳಿಗೆ ಬರ್ತ್ ಬಾಡಿಗೆ, ಬಂದರು ಶುಲ್ಕ ಮತ್ತು ಪೈಲಟೇಜ್ ಶುಲ್ಕಗಳಲ್ಲಿ ಶೇ. 35ರಷ್ಟು ರಿಯಾಯಿತಿ.
2 ಮೇನ್ಲೈನ್ ಕಂಟೇನರ್ ಹಡಗುಗಳಿಗೆ ಬರ್ತ್ ಬಾಡಿಗೆ, ಬಂದರು ಶುಲ್ಕ ಮತ್ತು ಪೈಲಟೇಜ್ ಶುಲ್ಕಗಳಲ್ಲಿ ಶೇ. 50ರಷ್ಟು ರಿಯಾಯಿತಿ.
ಪರಿಷ್ಕೃತ ರಿಯಾಯಿತಿ ವ್ಯವಸ್ಥೆಯು 2026ರ ನವೆಂಬರ್ 3ರಿಂದ 2027ರ ಮಾರ್ಚ್ 31ರವರೆಗೆನವ ಮಂಗಳೂರು ಬಂದರಿನಲ್ಲಿ ಲಂಗರು ಹಾಕುವ ಕಂಟೇನರ್ ಹಡಗುಗಳಿಗೆ, ಕಂಟೇನರ್ ಸರಕು ನಿರ್ವಹಣೆಗೆ ಸಂಬಂಧಿಸಿದಂತೆ ಮಾತ್ರ ಅನ್ವಯವಾಗಲಿದೆ. ಹಡಗಿನ ಧ್ವಜ ಬದಲಾವಣೆ, ಬಂಕರ್ ಇಂಧನ ಪೂರೈಕೆ ಮುಂತಾದ ಇತರ ಪೂರಕ ಚಟುವಟಿಕೆಗಳಿಗೆ ಈ ರಿಯಾಯಿತಿಗಳು ಅನ್ವಯಿಸುವುದಿಲ್ಲ.

ನವ ಮಂಗಳೂರು ಬಂದರು 2025-26ನೇ ಹಣಕಾಸು ವರ್ಷದಲ್ಲಿ 1,92,307 TEUs (ಇಪ್ಪತ್ತು ಅಡಿ ಸಮಾನ ಘಟಕ)ಕಂಟೇನರ್ ಸರಕು ನಿರ್ವಹಿಸಿದೆ. ಈ ಹೊಸ ನೀತಿಯ ಅನುಷ್ಠಾನದೊಂದಿಗೆ ಕಂಟೇನರ್ ಸರಕು ನಿರ್ವಹಣೆಯಲ್ಲಿ ಮತ್ತಷ್ಟು ಹೊಸ ಮೈಲಿಗಲ್ಲುಗಳನ್ನು ಸಾಧಿಸುವ ಗುರಿಯನ್ನು ಬಂದರು ಹೊಂದಿದೆ.
ಇಂತಹ ಸಕ್ರಿಯ ವ್ಯಾಪಾರ ಉತ್ತೇಜನ ಕ್ರಮಗಳ ಮೂಲಕ ಎನ್ಎಂಪಿಎ ತನ್ನ ಕಂಟೇನರ್ ನಿರ್ವಹಣಾ ವ್ಯವಸ್ಥೆಯನ್ನು ಬಲಪಡಿಸುವುದು, ಒಳನಾಡು ಸಂಪರ್ಕ ಜಾಲವನ್ನು ವಿಸ್ತರಿಸುವುದು ಹಾಗೂ ಕರ್ನಾಟಕ ಮತ್ತು ನೆರೆಯ ಪ್ರದೇಶಗಳ ವ್ಯಾಪಾರ ಮತ್ತು ಕೈಗಾರಿಕಾ ವಲಯಕ್ಕೆ ಸ್ಪರ್ಧಾತ್ಮಕ ಕಡಲ ಪ್ರವೇಶ ದ್ವಾರವಾಗಿ ನವ ಮಂಗಳೂರು ಬಂದರನ್ನು ಅಭಿವೃದ್ಧಿಪಡಿಸುವತ್ತ ನಿರಂತರವಾಗಿ ಗಮನಹರಿಸಿದೆ.

ಇದಲ್ಲದೆ ಮೇಲಿನ ನೀತಿಯ ಜೊತೆಗೆ ಅರ್ಹ ರಫ್ತುದಾರರು ನಿಗದಿತ ಮಾನದಂಡಗಳನ್ನು ಪೂರೈಸಿದಲ್ಲಿ 2026ರ ಸೆಪ್ಟೆಂಬರ್ 23ರಿಂದ ಅನ್ವಯವಾಗುವಂತೆ ಕಬ್ಬಿಣದ ಅದಿರಿನ ಪುಡಿ (Iron Ore Fines) ಮತ್ತು ತುಂಡುಗಳ (Lumps) ರಫ್ತಿಗೆ ಸರಕು ಸಂಬಂಧಿತ ಶುಲ್ಕಗಳಲ್ಲಿ ಶೇ. 20ರಷ್ಟು ರಿಯಾಯಿತಿ ನೀಡುವ ಪ್ರೋತ್ಸಾಹಕ ಯೋಜನೆಯನ್ನೂಬಂದರು ಜಾರಿಗೊಳಿಸಿದೆ.

