
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನಾಡಹಬ್ಬ ದಸರಾ ಉದ್ಘಾಟನೆಗೂ ಮುನ್ನ ಧರ್ಮಪತ್ನಿ ಉಷಾ ಹಾಗೂ ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರ ಜತೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ನಾಡಿನ ಹಾಗೂ ಜನರ ಒಳಿತಿಗೆ ಪ್ರಾರ್ಥಿಸಿದರು.


ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ದಸರಾ ಉದ್ಘಾಟಿಸುವ ಮೂಲಕ ನಾಡಹಬ್ಬಕ್ಕೆ ಹೊಸ ಶಕ್ತಿ, ಹುರುಪು ಹಾಗೂ ಯುವ ಚೈತನ್ಯ ತುಂಬಿದ್ದಾರೆ, ಅವರಿಂದ ದಸರಾಕ್ಕೆ ಹೊಸ ಮೆರುಗು ಬಂದಿದೆ ಶ್ರೀಗಳ ಸಮಾಜಸೇವೆ ದೇಶಕ್ಕೆ ಮಾದರಿ, ಕೊಪ್ಪಳದ ಗವಿಮಠ ಸರ್ವಜನಾಂಗದ ಶಾಂತಿಯ ಮಠ ಅವರು ಕೇವಲ ಮಠದ ಸ್ವಾಮೀಜಿಯಲ್ಲ, ಜನರ ಸ್ವಾಮೀಜಿ ಎಂದು ಬಣ್ಣಿಸಿದರು.

ಮುಖ್ಯಮಂತ್ರಿಯಾಗಿ ನಾಡಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅವಕಾಶ ದೊರೆತಿರುವುದು ತಮ್ಮ ಬದುಕಿನ ಸ್ಮರಣೀಯ ದಿನ ಹಾಗೂ ಹೊಸ ಅಧ್ಯಾಯ ಎಂದು ಬಣ್ಣಿಸಿದ ಅವರು ತಾಯಿ ಚಾಮುಂಡೇಶ್ವರಿ ಮತ್ತು ನಾಡಿನ ಜನತೆಗೆ ಕೃತಜ್ಞತೆ ಸಲ್ಲಿಸಿದರು. ನಾಲ್ಕು ಶತಮಾನಗಳಿಗೂ ಹಿಂದಿನ ಪರಂಪರೆಯನ್ನು ಹೊತ್ತ ದಸರಾ ಕಾಲಕ್ಕೆ ತಕ್ಕಂತೆ ರೂಪಾಂತರಗೊಂಡು ನಾಡಿನ ಜನರೆಲ್ಲರೂ ಒಗ್ಗೂಡುವ ಉತ್ಸವವಾಗಿ ಬೆಳೆದಿದೆ ಎಂದರು.
ಮೈಸೂರಿನ ದೊಡ್ಡ ಸಂಪತ್ತು ಅರಮನೆಗಳಷ್ಟೇ ಅಲ್ಲ. ನಗರದ ಹೆಸರಿನ ಮೇಲಿರುವ ಜನರ ನಂಬಿಕೆಯೂ ಅದರ ಪ್ರಮುಖ ಆಸ್ತಿಯಾಗಿದೆ. ಕೆಲವು ನಗರಗಳು ಯುದ್ಧ ಮತ್ತು ಹೋರಾಟಗಳಿಂದ ಬೆಳೆದರೆ, ಮೈಸೂರು ತನ್ನ ಸಂಸ್ಕೃತಿಯಿಂದ ಬೆಳೆದ ನಗರ ಎಂದು ಹೇಳಿದರು.

“ವಿಜಯನಗರದ ಅರಸರು ಆರಂಭಿಸಿದ ದಸರಾ ಪರಂಪರೆಯನ್ನು ಮೈಸೂರು ಒಡೆಯರು ಮುಂದುವರಿಸಿ, ಅದರ ಸಾಂಸ್ಕೃತಿಕ ದೀಪ ಆರದಂತೆ ಕಾಪಾಡಿದರು ಅರಸರು ದಸರಾವನ್ನು ಕೇವಲ ಪೂಜೆ ಮತ್ತು ಧಾರ್ಮಿಕ ಆಚರಣೆಗಳಿಗೆ ಸೀಮಿತಗೊಳಿಸದೆ, ಕಲೆ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ವೇದಿಕೆಯನ್ನಾಗಿ ರೂಪಿಸಿದರು” ಎಂದು ಸ್ಮರಿಸಿದರು.

“ನವದುರ್ಗೆಯರ ಆಶೀರ್ವಾದ ಸರ್ಕಾರದ ಮೇಲಿರಲಿ ದುರ್ಗೆಯರ ಜೊತೆಗೆ ರಾಜ್ಯದ ಕೋಟ್ಯಂತರ ತಾಯಂದಿರ ಆಶೀರ್ವಾದವೂ ನಮ್ಮ ಮೇಲಿದೆ ದೇವರ ಕೃಪೆ ಜನರ ಮೇಲಿರಲಿ, ಜನರ ಕೃಪೆ ನಮ್ಮ ಮೇಲಿರಲಿ, ದಸರಾ ಕೇವಲ ಧಾರ್ಮಿಕ ಆಚರಣೆಯಲ್ಲ ಅದು ಪರಂಪರೆ, ಕಲೆ, ಸಂಸ್ಕೃತಿ, ಸಾಮಾಜಿಕ ಸಾಮರಸ್ಯ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಒಂದೆಡೆ ಸೇರಿಸುವ ಮಹೋತ್ಸವ, ಈ ಪರಂಪರೆಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಮೂಲಕ ಕನ್ನಡಿಗರ ಸ್ವಾಭಿಮಾನ ಮತ್ತು ಮೈಸೂರಿನ ಸಾಂಸ್ಕೃತಿಕ ವೈಭವವನ್ನು ಜಗತ್ತಿಗೆ ಪರಿಚಯಿಸಬೇಕು” ಎಂಬ ಆಶಯವನ್ನು ವ್ಯಕ್ತಪಡಿಸಿದರು.


ಬರವನ್ನು ಎದುರಿಸಲು ಜಲದೀಕ್ಷೆಯ ಸಂದೇಶ ನೀಡಿರುವ ಶ್ರೀಗಳು ಭಗೀರಥರಿದ್ದಂತೆ, ನೀರನ್ನು ವ್ಯರ್ಥ ಮಾಡುವುದು ಮುಂದಿನ ಪೀಳಿಗೆಯ ರಕ್ತ ಹೀರಿದಂತೆ ಎಂಬ ಅವರ ಮಾತು ಪ್ರತಿಯೊಬ್ಬರಿಗೂ ಎಚ್ಚರಿಕೆಯಾಗಿದೆ. ಇಡೀ ರಾಜ್ಯಕ್ಕೆ ಈಗ ಜಲದೀಕ್ಷೆಯ ಅಗತ್ಯವಿದೆ ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಬೇಕು ಎಂದು ಕರೆ ನೀಡಿದರು.

ಸಿಎಂ ಡಿಕೆ ಶಿವಕುಮಾರ್ ಅವರ ಪತ್ನಿ ಉಷಾ, ಸಚಿವರಾದ ರಾಮಲಿಂಗಾರೆಡ್ಡಿ, ಈಶ್ವರ ಖಂಡ್ರೆ, ಯತೀಂದ್ರ ಸಿದ್ದರಾಮಯ್ಯ, ಪುಟ್ಟರಂಗಶೆಟ್ಟಿ, ಕೆ ಎಸ್ ಬಸವಂತಪ್ಪ, ರಿಜ್ವಾನ್ ಅರ್ಷದ್, ಶಿವರಾಜ ತಂಗಡಗಿ, ಅಜಯ್ ಸಿಂಗ್, ಸಂಸದ ಸುನೀಲ್ ಬೋಸ್, ಶಾಸಕರಾದ ಎಚ್ ಸಿ ಮಹದೇವಪ್ಪ, ಹರೀಶ್ ಗೌಡ, ಅನಿಲ್ ಚಿಕ್ಕಮಾದು, ತನ್ವೀರ್ ಸೇಠ್, ಕೆ. ವೆಂಕಟೇಶ್, ಜಿ ಟಿ ದೇವೆಗೌಡ, ದರ್ಶನ್ ದ್ರುವನಾರಾಯಣ್, ಎ ಆರ್ ಕೃಷ್ಣಮೂರ್ತಿ, ಡಿ ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ಡಾ ಕೆ ಶಿವಕುಮಾರ್, ಡಿ ತಿಮ್ಮಯ್ಯ, ವಿವೇಕಾನಂದ, ರಘು ಕೌಟಿಲ್ಯ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ ನರೇಂದ್ರ, ಬೋವಿ ನಿಗಮದ ಅಧ್ಯಕ್ಷ ರಾಮಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

