
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ನಾಟಕ ಸೇರಿ ವಿವಿಧ 6 ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಿ ಸೋಮವಾರ ಆದೇಶಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕಿ ಮತ್ತು ಸಂಸದೀಯ ಮಂಡಳಿಯ ಸದಸ್ಯೆಯಾಗಿರುವ ಡಾ.ಸುಧಾ ಯಾದವ್ ಅವರನ್ನು ರಾಜ್ಯದ ನೂತನ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.
ಜೊತೆಗೆ ಸಿಕ್ಕಿಂನ ರಾಜ್ಯಪಾಲರಾದ ಓಂ ಪ್ರಕಾಶ್ ಮಾಥುರ್ ಅವರನ್ನು ಕೇರಳದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ, ಹಾಗೂ ಕೇರಳದ ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ತಮಿಳುನಾಡಿನ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ, ಬ್ರಜ್ ಮೋಹನ್ ರಾಮ್ ಅವರನ್ನು ಒಡಿಶಾದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ, ಡಾ. ಧಲ್ ಸಿಂಗ್ ಬಿಸೆನ್ ಅವರನ್ನು ಉತ್ತರಾಖಂಡದ ರಾಜ್ಯಪಾಲರನ್ನಾಗಿ ಹಾಗೂ ದುಷ್ಯಂತ್ ಗೌತಮ್ ಅವರಿಗೆ ಸಿಕ್ಕಿಂನ ರಾಜ್ಯಪಾಲರ ಜವಾಬ್ದಾರಿಯನ್ನು ನೀಡಲಾಗಿದೆ.

ಉನ್ನತ ಶೈಕ್ಷಣಿಕ ಅರ್ಹತೆ ಹೊಂದಿರುವ ಇವರು ಐಐಟಿ ರೂರ್ಕಿಯಿಂದ ರಸಾಯನಶಾಸ್ತ್ರದಲ್ಲಿ ಎಂಎಸ್ಸಿ ಮತ್ತು ಪಿಎಚ್ಡಿ ಪದವಿಗಳನ್ನು ಪಡೆದಿದ್ದಾರೆ, ಕರ್ನಾಟಕದ ನೂತನ ರಾಜ್ಯಪಾಲರಾಗಿ ಬಿಜೆಪಿಯ ಪಾರ್ಲಿಮೆಂಟರಿ ಬೋರ್ಡ್ ಸದಸ್ಯೆ ಹಾಗೂ ಮಾಜಿ ಸಂಸದೆ ಡಾ. ಸುಧಾ ಯಾದವ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೇಮಕ ಮಾಡಿದ್ದಾರೆ. ಪ್ರಸ್ತುತ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ ಥಾವರ್ ಚಂದ್ ಗೆಹ್ಲೋಟ್ ಅವರ ಸ್ಥಾನಕ್ಕೆ 60 ವರ್ಷದ ಡಾ. ಸುಧಾ ಯಾದವ್ ಅವರನ್ನು ನಿಯೋಜಿಸಲಾಗಿದ್ದು, ರಾಷ್ಟ್ರಪತಿ ಭವನವು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ.

ಹರಿಯಾಣದ ಯಾದವ್ ಸಮುದಾಯಕ್ಕೆ ಸೇರಿದ ಒಬಿಸಿ (OBC) ನಾಯಕಿಯಾದ ಡಾ. ಸುಧಾ ಯಾದವ್ ಅವರು ಸಾರ್ವಜನಿಕ ಸೇವೆ, ರಾಜಕೀಯ ಅನುಭವ ಮತ್ತು ಶೈಕ್ಷಣಿಕ ಸಾಧನೆಯ ಹಿನ್ನೆಲೆಯನ್ನು ಹೊಂದಿದ್ದಾರೆ. 1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಅವರ ಪತಿ, ಬಿಎಸ್ಎಫ್ ಡೆಪ್ಯುಟಿ ಕಮಾಂಡೆಂಟ್ ಸುಖ್ಬೀರ್ ಸಿಂಗ್ ಯಾದವ್ ಅವರು ವೀರಮರಣ ಹೊಂದಿದ್ದರು, ಪತಿಯ ಅಗಲಿಕೆಯ ನಂತರ ರಾಜಕೀಯ ಪ್ರವೇಶಿಸಿದ ಸುಧಾ ಯಾದವ್ ಅವರನ್ನು 1999ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹರಿಯಾಣದ ಮಹೇಂದ್ರಗಢ ಕ್ಷೇತ್ರದಿಂದ ಕಣಕ್ಕಿಳಿಸಿತು. ಆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅವರು 13ನೇ ಲೋಕಸಭೆಯ (1999 – 2004) ಸದಸ್ಯೆಯಾಗಿ ಆಯ್ಕೆಯಾಗಿದ್ದರು.

