ಅಂತಾರಾಷ್ಟ್ರೀಯ

ದೋಹಾ:- ಕೆಎಸ್‌ಕ್ಯೂ ಅಧ್ಯಕ್ಷ “ಸುಬ್ರಹ್ಮಣ್ಯ ಹೆಬ್ಬಾಗಿಲು” ಅವರಿಗೆ ಐಸಿಸಿ ಕತಾರ್ ಗೌರವ ಹಾಗೂ ಸನ್ಮಾನ.

ಕತಾರ್‌ನಲ್ಲಿರುವ ಭಾರತೀಯ ಸಮುದಾಯಕ್ಕೆ ನೀಡಿದ ಅಪಾರ ಕೊಡುಗೆ ಹಾಗೂ ಕ್ರಿಯಾಶೀಲ ನಾಯಕತ್ವವನ್ನು ಗುರುತಿಸಿ, ಕತಾರ್‌ನ ಭಾರತೀಯ ಸಾಂಸ್ಕೃತಿಕ ಕೇಂದ್ರವು (ಐಸಿಸಿ) “ಕರ್ನಾಟಕ ಸಂಘ ಕತಾರ್”(ಕೆಎಸ್‌ಕ್ಯೂ) ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ಅದ್ಧೂರಿಯಾಗಿ ಸನ್ಮಾನಿಸಿ ಗೌರವಿಸಿತು.
ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿರುವ ಐಸಿಸಿಯ “ಅಶೋಕ ಹಾಲ್”ನಲ್ಲಿ ಆಯೋಜಿಸಲಾಗಿದ್ದ 101ನೇ ಆವೃತ್ತಿಯ “ವೆಡ್ನೆಸ್‌ಡೇ ಫಿಯೆಸ್ಟಾ – ಸಿಲ್ವರ್ ರೈಸ್” ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಈ ಸನ್ಮಾನ ನೀಡಲಾಯಿತು, ಕೆಎಸ್‌ಕ್ಯೂ ಸಂಸ್ಥೆಯು ಭಾರತೀಯ ರಾಯಭಾರ ಕಚೇರಿಯ ಮಾನ್ಯತೆ ಪಡೆದ ಪ್ರಮುಖ ಸಂಘಟನೆಯಾಗಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕತಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಕೌನ್ಸಿಲರ್ (ಹೆಡ್ ಆಫ್ ಚಾನ್ಸರಿ ಮತ್ತು ಕಾನ್ಸುಲರ್) ಡಾ. ವೈಭವ್ ಎ. ತಾಂಡಲೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣವನ್ನು ಮಾಡಿದ ಐಸಿಸಿ ಅಧ್ಯಕ್ಷ ಎ.ಪಿ. ಮಣಿಕಂಠನ್ ಅವರು, ಸಮುದಾಯದ ಮುಖಂಡರ ಸೇವೆಯನ್ನು ಶ್ಲಾಘಿಸುತ್ತಾ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರ ಸಮಾಜಸೇವೆ ಮತ್ತು ಸಂಘಟನಾ ಕಾರ್ಯಗಳನ್ನು ಕೊಂಡಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಬ್ರಹ್ಮಣ್ಯ ಹೆಬ್ಬಾಗಿಲು, ಭಾರತೀಯ ರಾಯಭಾರ ಕಚೇರಿ, ಐಸಿಸಿ ಆಡಳಿತ ಮಂಡಳಿ ಹಾಗೂ ಕೆಎಸ್‌ಕ್ಯೂ ಕಾರ್ಯಕಾರಿ ಸಮಿತಿಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು.
ಐಸಿಸಿ ಹಣಕಾಸು ಮುಖ್ಯಸ್ಥ ಬಿಸ್ವಜಿತ್ ಬ್ಯಾನರ್ಜಿ ಅವರ ಸ್ವಾಗತದೊಂದಿಗೆ ಆರಂಭವಾದ ಈ ವರ್ಣರಂಜಿತ ಸಂಜೆಯು ಸಂತೋಷ್ ಕುಲಕರ್ಣಿ ಅವರ ವಂದನಾರ್ಪಣೆಯೊಂದಿಗೆ ಮುಕ್ತಾಯಗೊಂಡಿತು.

ಕಾರ್ಯಕ್ರಮದಲ್ಲಿ ಐಸಿಸಿ ಸಲಹಾ ಮಂಡಳಿ ಅಧ್ಯಕ್ಷ ಪಿ.ಎನ್. ಬಾಬು ರಾಜನ್, ಉಪಾಧ್ಯಕ್ಷ ಶಾಂತನು ದೇಶಪಾಂಡೆ, ಪ್ರಧಾನ ಕಾರ್ಯದರ್ಶಿ ಅಬ್ರಹಾಂ ಕೆ. ಜೋಸೆಫ್, ವಿವಿಧ ಸಂಘಟನೆಗಳ ಅಧ್ಯಕ್ಷರು ಹಾಗೂ ಭಾರತೀಯ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *