ರಾಜ್ಯ

71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ “ಕನ್ನಡ ಬಾವುಟಕ್ಕೆ ಅಧಿಕೃತ ನಾಡಧ್ವಜ ಸ್ಥಾನಮಾನ ನೀಡಲು ಸರ್ಕಾರ ಚಿಂತನೆ ನಡೆಸಿದ್ದು, ಈ ವಿಚಾರವಾಗಿ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್

ಸಿಎಂ ಡಿ ಕೆ ಶಿವಕುಮಾರ್ ಅವರು ವಿಧಾನಸೌಧ ಆವರಣದಲ್ಲಿನ ಭುವನೇಶ್ವರಿ ದೇವಿ ಪ್ರತಿಮೆಗೆ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಪುಷ್ಪಾರ್ಚನೆ ಮಾಡಿದರು.

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ‌ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ‌ ಆಯೋಜಿಸಿದ್ದ 71ನೇ‌ ಕನ್ನಡ ರಾಜ್ಯೋತ್ಸವ ಸಮಾರಂಭದ ಧ್ವಜಾರೋಹಣ ನೆರವೇರಿಸಿದರು.

ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳ ಪಥಸಂಚಲನ‌ ವೀಕ್ಷಿಸಿ ಗೌರವ ಸ್ವೀಕರಿಸಿದರು.

“ಸಿಎಂವಿದ್ಯಾರ್ಥಿ ಸಹಾಯಸ್ತ” ಯೋಜನೆ ಲೋಕಾರ್ಪಣೆ ಗೊಳಿಸಿದರು. “ಗ್ರಾಮಾನುಭವ” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಾಗೂ ಸದಾಶಿವನಗರ ನಿವಾಸ ಮತ್ತು ವಿಧಾನಸೌಧದ ಭುವನೇಶ್ವರಿ ಪ್ರತಿಮೆ ಬಳಿ ಸಿಎಂ ಡಿ ಕೆ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಈ ವಿಚಾರ ತಿಳಿಸಿದರು.
“ನಾನು ಈಗಷ್ಟೇ ರಾಷ್ಟ್ರಧ್ವಜದ ಪಕ್ಕ ಕನ್ನಡ ಧ್ವಜ ಹಾರಿಸಿದ್ದೇನೆ. ಈ ಕನ್ನಡ ಬಾವುಟಕ್ಕೆ ಅಧಿಕೃತ ಸ್ಥಾನಮಾನ ನೀಡಲು ಮುಂದಾಗಿದ್ದೇವೆ. ಈ ಹಿಂದೆ ಸಂಪುಟದಲ್ಲಿ ಈ ಬಗ್ಗೆ ತೀರ್ಮಾನ ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆವು. ಆದರೆ ನಮಗೆ ಈವರೆಗೂ ಮಾನ್ಯತೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿದ್ದು, ಮತ್ತೊಂದು ಸುತ್ತಿನ ಸಮಾಲೋಚನೆ ನಡೆಸಲಾಗುವುದು. ರಾಷ್ಟ್ರಧ್ವಜದ ಗೌರವ ಮತ್ತು ನಿಯಮಗಳಿಗೆ ಯಾವುದೇ ಧಕ್ಕೆಯಾಗದಂತೆ ಕನ್ನಡ ಧ್ವಜದ ಬಳಕೆ, ಸ್ಥಾನಮಾನ ಹಾಗೂ ಸಂರಕ್ಷಣೆಗೆ ಸಂಬಂಧಿಸಿದ ಕಾನೂನು ಅಂಶಗಳನ್ನು ಪರಿಶೀಲಿಸಲಾಗುತ್ತಿದೆ” ಎಂದರು.

“ಕನ್ನಡ ರಾಜ್ಯೋತ್ಸವದ 71ನೇ ವರ್ಷದಿಂದ ಮುಂದಿನ ಒಂದು ವರ್ಷದ ಅವಧಿಯಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಕನ್ನಡದ ಹಿರಿಮೆ ಸಾರಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಎಲ್ಲ ಸರ್ಕಾರಿ ಕಚೇರಿಗಳ ಮೇಲೆ ಕನ್ನಡ ಧ್ವಜ ಹಾರಿಸುವುದರ ಜತೆಗೆ, ಸರ್ಕಾರದ ಬೆಂಬಲ ಹೊಂದಿರುವ ಸಂಸ್ಥೆಗಳಲ್ಲೂ ಕನ್ನಡ ಬಾವುಟ ಹಾರಿಸುವುದನ್ನು ಕಡ್ಡಾಯಗೊಳಿಸುವ ಚಿಂತನೆ ಇದೆ. ಖಾಸಗಿ ಸಂಸ್ಥೆಗಳೂ ಕನ್ನಡ ಧ್ವಜ ಹಾರಿಸುವಂತೆ ಈ ತಿಂಗಳಲ್ಲೇ ಸರ್ಕಾರದ ಆದೇಶ ಹೊರಡಿಸಲು ಸಿದ್ಧತೆ ನಡೆಸಲಾಗುತ್ತಿದೆ” ಎಂದು ತಿಳಿಸಿದರು.

“ನಮ್ಮ ಉಸಿರು, ಹೆಸರು, ಕಸುಬು ಕನ್ನಡ. ನಮ್ಮ ನುಡಿ ಬಹಳ ಚೆಂದ, ಅದರಲ್ಲಿ ಏನೇ ಗೀಚಿದರೂ ಆಗುವುದು ಶ್ರೀಗಂಧ. ತನು ಕನ್ನಡ, ಮನ ಕನ್ನಡ, ನುಡಿ ಕನ್ನಡ, ನಡೆ ಕನ್ನಡ. ಅದನ್ನು ಆಚರಿಸಲು ನಾವು ಸೇರಿದ್ದೇವೆ. ಜಗದ ಏಳಿಗೆಗೆ ದಾ ರಾ ಬೇಂದ್ರೆ ಅವರು ಕನ್ನಡ ಕರ್ನಾಟಕದ ದಿಕ್ಸೂಚಿ, ಕರ್ನಾಟಕ ಭಾರತದ ಭವಿಷ್ಯ. ಮಾತೃಭಾಷೆ ಮೂಲಕ ಜ್ಞಾನದ ಸಂಸ್ಕೃತಿ ಹರಿಯುತ್ತಿದೆ ಎಂದು ಪ್ರತಿಪಾದಿಸಿದ್ದಾರೆ. ಭಾಷೆ ಸಂಸ್ಕೃತಿ, ಜ್ಞಾನದ ಪ್ರತಿಬಿಂಬ, ಹೆತ್ತ ತಾಯಿ, ಹುಟ್ಟಿದ ನಾಡು ಸ್ವರ್ಗಕ್ಕಿಂತ ಮಿಗಿಲು ಎಂದು ನಮಗೆ ಮಾರ್ಗದರ್ಶನ ನೀಡಿದ್ದಾರೆ. ನಾವು ಬೇರೆಯವರ ಮನಸ್ಸನ್ನು ಕನ್ನಡದಿಂದಲೇ ಗೆಲ್ಲಬೇಕು. ನಾವು ಯಾವುದೇ ದೇಶದಲ್ಲಿದ್ದರೂ ನಮ್ಮ ಉಸಿರು ಕನ್ನಡವಾಗಿರಬೇಕು” ಎಂದು ಕರೆಕೊಟ್ಟರು.
“ನಮ್ಮ ಸರ್ಕಾರಿ ಶಾಲೆಗಳ ಜತೆ ಖಾಸಗಿ ಶಾಲೆ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ಆ ಶಾಲೆ ಶಿಕ್ಷಕರು ಹಾಗೂ ಸಂಸ್ಥೆಯವರಿಗೆ ಅಭಿನಂದಿಸುತ್ತೇನೆ. ಕನ್ನಡ ಕೇವಲ ಸರ್ಕಾರಿ ಭಾಷೆ ಮಾತ್ರವಲ್ಲ, ಹೃದಯದ ಭಾಷೆಯಾಗಬೇಕು. ಭಾಷೆ ಎಂಬುದು ಬದುಕು, ಭಾಷೆ ಇಲ್ಲದ ಬದುಕು ಮೂಕಿಚಿತ್ರದಂತಾಗುತ್ತದೆ. ಕನ್ನಡದ ಬೇರು ಕರ್ನಾಟಕದಲ್ಲಿದ್ದರೂ ಅದರ ರೆಂಬೆ ಕೊಂಬೆ, ರುಚಿ ಇಡೀ ಪ್ರಪಂಚಕ್ಕೆ ವಿಸ್ತರಿಸಿದೆ. ಸಾವಿರಾರು ಕನ್ನಡಿಗರು ವಿಶ್ವದ ನಾನಾ ಕಡೆ ನೆಲೆಸಿ ಕನ್ನಡದ ಕಂಪನ್ನು ಹರಡುತ್ತಿದ್ದಾರೆ. ಕಲೆ ಕ್ರೀಡೆ, ವಿಜ್ಞಾನ ಐಟಿ ಬಿಟಿ ಸೇರಿದಂತೆ ಯಾವುದೇ ಕ್ಷೇತ್ರದಲ್ಲಾದರೂ ಕನ್ನಡದ ಸಾರ್ವಭೌಮತೆ ಬೆಳಎಯಬೇಕು. ಕನ್ನಡ ಎನ್ನುವುದು ಆಭರಣ ಇದ್ದಂತೆ. ಈ ಆಭರಣ ಕಳೆಯದಂತೆ ಕಾಪಾಡುವ ಹೊಣೆಗಾರಿಕೆ ನಿಮ್ಮ ಮೇಲಿದೆ” ಎಂದರು.

“ನಮ್ಮ ಮಕ್ಕಳು ಏಷ್ಯನ್ ಗೇಮ್ಸ್ ನಲ್ಲಿ 8 ಪದಕ ಗೆದ್ದಿದ್ದಾರೆ. ನಮ್ಮ ಸರ್ಕಾರ ಚಿನ್ನದ ಪದಕ ವಿಜೇತರಿಗೆ 1 ಕೋಟಿ, ಬೆಳ್ಳಿ ಗೆದ್ದವರಿಗೆ 75 ಲಕ್ಷ, ಕಂಚು ಗೆದ್ದವರಿಗೆ 50 ಲಕ್ಷ ನಗದು ಬಹುಮಾನ ನೀಡಿ ಪ್ರೋತ್ಸಾಹ ನೀಡಿದೆ. ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿದ 20 ಕ್ರೀಡಾಪಟುಗಳಿಗೆ ತಲಾ 5 ಲಕ್ಷ ನೀಡಲಾಗಿದೆ. ಪ್ಯಾರಾಲಿಂಪಿಕ್ಸ್ ಗೆ ತಯಾರಾಗುತ್ತಿರುವ ಕ್ರೀಡಾಪಟುಗಳ ಸಿದ್ಧತೆಗೆ ತಲಾ 10 ಲಕ್ಷ ನೀಡಲಾಗುತ್ತಿದೆ. ಕ್ರೀಡಾಪಟುಗಳಿಗೆ ಸರ್ಕಾರಿ ಕೆಲಸಗಳಲ್ಲಿ ಶೇ.2ರಷ್ಟು, ಅರಣ್ಯ ಹಾಗೂ ಪೊಲೀಸ್ ಇಲಾಖೆಗಳಲ್ಲಿ ಶೇ.3ರಷ್ಟು ಮೀಸಲಾತಿ ನೀಡಿದ್ದೇವೆ. ಒಲಿಂಪಿಕ್ಸ್ ನಿಮ್ಮ ಗುರಿಯಾಗಿ ತಯಾರಾಗಬೇಕು. ಓದಿನ ಜತೆಗೆ ಕ್ರೀಡಾ, ಕಲೆ, ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ನಿಮ್ಮ ಹಿಂದೆ ನಾವಿದ್ದೇವೆ. ನೀವು ಧೈರ್ಯವಾಗಿ ಹೊಸ ನಕ್ಷೆ ತಯಾರಿಸಿ ಸಿದ್ಧರಾಗಿ” ಎಂದು ಕರೆ ನೀಡಿದರು.

“ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು ರೈತರು ಸಕಷ್ಟದಲ್ಲಿದ್ದಾರೆ. ಅವರಿಗೆ ಶಕ್ತಿ ತುಂಬಲು ಪ್ರತಿ ಲೀಟರ್ ಹಾಲಿನ ಬೆಲೆಯನ್ನು 8 ರೂ. ಹೆಚ್ಚಿಸಿದ್ದೇವೆ. ಇದರಲ್ಲಿ ರೈತರಿಗೆ 7 ಹಾಗೂ ಒಕ್ಕೂಟಗಳಿಗೆ ಸೊಸೈಟಿಗಳಿಗೆ ತಲುಪಲಿದೆ. ಇದರಿಂದ 11 ಲಕ್ಷ ರೈತ ಕುಟುಂಬಗಳಿಗೆ ನೆರವಾಗಲಿದೆ. ಮುಖ್ಯಮಂತ್ರಿ ರಸ್ತೆ ಸಂಪರ್ಕ ಯೋಜನೆಗೆ 10 ಸಾವಿರ ಕೋಟಿ ನೀಡಿದ್ದು, 20 ಸಾವಿರ ಕಿ.ಮೀ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ರಸ್ತೆಗಳ ಅಭಿವೃದ್ಧಿಗೆ ಪ್ರತಿ ಪಂಚಾಯ್ತಿಗೆ 6 ಸಾವಿರ ಕೋಟಿ ಹಣ ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಸರ್ಕಾರಿ ಆಸ್ಪತ್ರೆ ದತ್ತು ಯೋಜನೆ ಪ್ರಾರಂಭಿಸಿದ್ದು, 11 ವೈದ್ಯಕೀಯ ಕಾಲೇಜುಗಳು ಇದಕ್ಕೆ ಸಹಿ ಮಾಡಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 100 ಹೊಸ ಆಂಬುಲೆನ್ಸ್ ಗಳನ್ನು ಲೋಕಾರ್ಪಣೆಗೊಳಿಸಲಾಗುವುದು ” ಎಂದು ತಿಳಿಸಿದರು.
“ಆರ್ಥಿಕ ಇಲಾಖೆಯೊಂದಿಗೆ ಚರ್ಚೆ ಮಾಡಿ 1995ರ ನಂತರ ಪ್ರಾರಂಭವಾದ ಸರ್ಕಾರಿ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡಲು ಕೆಲವು ದಿನಗಳಲ್ಲಿ ಅವರೊಂದಿಗೆ ಚರ್ಚೆ ಮಾಡಿ ಸಹಾಯ ಮಾಡಲಾಗುವುದು. ಇನ್ನು ಬಡ ರೈತರಿಗಾಗಿ ಸರ್ಕಾರ ನೇಗಿಲ ಯೋಗಿ ಯೋಜನೆ ರೂಪಿಸಿದ್ದು, 3 ಎಕರೆವರೆಗೂ ಹೊಲವನ್ನು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಲು ಕಾರ್ಯಕ್ರಮ ರೂಪಿಸಲಾಗಿದೆ. ನಮ್ಮ ಸರ್ಕಾರ ಪ್ರಜಾಸೇವೆ ಇಲಾಖೆ ರೂಪಿಸಿದೆ. ಎಲ್ಲರ ಆಸ್ತಿ ದಾಖಲೆಗಳ ಮೂಲಕ ಮಾಲೀಕತ್ವ ಗಟ್ಟಿಗೊಳಿಸಲು ಭೂಗ್ಯಾರಂಟಿ ಜಾರಿಗೆ ತಂದಿದೆ. ರೈತರಿಗಾಗಿ ತೇಗದ ಸಿರಿ ಯೋಜನೆ ರೂಪಿಸಿದೆ. ಮಲೆನಾಡಿನ ಪ್ರದೇಶದ ರೈತರಿಗೆ ಅರಣ್ಯ ಇಲಾಖೆಯಿಂದ ಆಗುತ್ತಿದ್ದ ತೊಂದರೆ ಹಾಗೂ ರಸ್ತೂರಿ ರಂಗನ್ ವರದಿ ತಿರಸ್ಕರಿಸಲು ವಿಶೇಷ ಅಧಿವೇಶನ ನಡೆಸಿದ್ದೇವೆ. ಇನ್ನು ರಾಜ್ಯದಲ್ಲಿ 5 ಲಕ್ಷ ನಿವೇಶನಗಳನ್ನು ವಿತರಣೆ ಮಾಡಲು ಕಾರ್ಯಕ್ರಮ ನೀಡಲಾಗಿದೆ” ಎಂದು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಸಚಿವ ಮಧು ಬಂಗಾರಪ್ಪ, ಶಾಸಕ ಗಣೇಶ್ ಹುಕ್ಕೇರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.‌ಶಾಲಿನಿ ರಜನೀಶ್, ವಿಧಾನ ಪರಿಷತ್ ಸದಸ್ಯರಾದ ಡಾ.ಕೆ. ಗೋವಿಂದರಾಜು, ಎ ಪಿ ರಂಗನಾಥ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ವಿ. ರಶ್ಮೀ ಮಹೇಶ್, ಶಿಕ್ಷಣ ಇಲಾಖೆ ಆಯುಕ್ತೆ ವಿದ್ಯಾಕುಮಾರಿ, ಡಿಜಿಪಿ ಸಲೀಮ್, ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *