
ಮಂಗಳೂರು: ಲೋಕಸೇವಾ ವೃಂದದ ಸಂಸ್ಥಾಪಕರಾದ ಮಡಿಯಾಲ ನಾರಾಯಣ ಭಟ್ಟರ ಹುಟ್ಟೂರಾದ ಮಡಿಯಾಲ ಗ್ರಾಮದಲ್ಲಿ ಇದೇ ನವೆಂಬರ್‌ನಲ್ಲಿ ಕೃತಕ ಬುದ್ಧಿಮತ್ತೆ ಉನ್ನತ ಶಿಕ್ಷಣ ಕೇಂದ್ರ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ – ಎಐ) ಕಾರ್ಯಾರಂಭ ಮಾಡಲಿದೆ, ಜೂನ್ 2027 ರಿಂದ ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶ ಇರಲಿದೆ ಎಂದು “ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್” ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಿಸಿದರು.
ನಗರದಲ್ಲಿ ನಡೆದ “ದಿವ್ಯ ಸಂಜೆ” ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿ ಉಲ್ಲಾಸ್ ಕಾಮತ್ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಲೋಕಸೇವಾ ವೃಂದದ ಮೂಲಕ ಶಿಕ್ಷಣ ವ್ಯವಸ್ಥೆಗೆ ಹೊಸ ರೂಪ ಕೊಡಲು ಪ್ರಯತ್ನಿಸಿದ ಮಡಿಯಾಲ ನಾರಾಯಣ ಭಟ್ಟರ ಜನ್ಮಶತಮಾನೋತ್ಸವ ವರ್ಷದಲ್ಲಿ ಅವರ ಸ್ಮರಣಾರ್ಥ ಬಂಟ್ವಾಳ ತಾಲೂಕಿನ ಅವರ ಹುಟ್ಟೂರಿನಲ್ಲಿ ಈ ಮಹತ್ವದ ಉಪಕ್ರಮ ಆರಂಭಿಸಲಾಗಿದೆ ಎಂದು ವಿವರಿಸಿದರು.


ಮಂಗಳೂರು ನಗರದಲ್ಲಿ ಎಲ್ಲ ಬಗೆಯ ಶಿಕ್ಷಣ ಕೋರ್ಸ್‌ಗಳೂ ಲಭ್ಯವಿವೆ, ಇದಕ್ಕೆ ಮತ್ತಷ್ಟು ಮೆರಗು ನೀಡಬೇಕು ಎಂದು ಯೋಚಿಸಿ ಇಲ್ಲಿ ಕೃತಕ ಬುದ್ಧಿಮತ್ತೆ, ಮಷೀನ್ ಲರ್ನಿಂಗ್ ಮತ್ತು ಕಂಪ್ಯೂಟರ್ ಶಿಕ್ಷಣಕ್ಕೆ ಒತ್ತು ಕೊಡುವ ವಿಶ್ವವಿದ್ಯಾಲಯದ ಉನ್ನತ ಶಿಕ್ಷಣ ಕೇಂದ್ರ ಆರಂಭಿಸುತ್ತಿದ್ದೇವೆ ಎಂದರು.
ಮಡಿಯಾಲ ಗ್ರಾಮದಲ್ಲಿ ನಾವು ಸ್ಥಾಪಿಸುತ್ತಿರುವ ಕೃತಕ ಬುದ್ಧಿಮತ್ತೆ ಮತ್ತು ಕಂಟ್ಯೂಟರ್ ಸೈನ್ಸ್ ಅಧ್ಯಯನ ಕೇಂದ್ರಗಳು ಸಹ ಭಾರತದ ಸನಾತನ ಜ್ಞಾನ ಪರಂಪರೆಯ ಭಾಗವೇ ಆಗುತ್ತವೆ, ಅಧ್ಯಾತ್ಮವನ್ನು ತನ್ನ ಕಾರ್ಯಚಟುವಟಿಕೆಗಳ ತಳಹದಿಯಾಗಿ ಹೊಂದಿರುವ ಸಂಸ್ಥೆಯೊಂದು ಇಂಥ ಕೇಂದ್ರಗಳನ್ನು ಆರಂಭಿಸುತ್ತಿರುವುದು ಹಲವು ದೃಷ್ಟಿಗಳಿಂದ ಮಹತ್ವದ ವಿಚಾರ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.


ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ – ಎಐ) ಅಥವಾ ಯಾವುದೇ ಅತ್ಯಾಧುನಿಕ ತಂತ್ರಜ್ಞಾನವು ಸನಾತನ ಧರ್ಮಕ್ಕೆ ಹೊರತಾದುದು ಅಲ್ಲ ಅಧ್ಯಾತ್ಮದಲ್ಲಿ ಮಹತ್ವದ ಸಾಧನೆ ಮಾಡಿ ಎತ್ತರಕ್ಕೆ ಏರಿದ್ದ ನಮ್ಮ ಋಷಿಗಳು ಏಕಕಾಲಕ್ಕೆ ವಿಜ್ಞಾನಿಗಳೂ ಆಗಿದ್ದರು ತಾಯಿ ಸರಸ್ವತಿ ಜ್ಞಾನದಲ್ಲಿ ಭೇದ ಮಾಡುವುದಿಲ್ಲ ಎಂದು ವಿವರಿಸಿದರು.
ಸನಾತನ ಧರ್ಮವು ಪುರಾತನ ಮೌಲ್ಯವಷ್ಟೇ ಅಲ್ಲ; ನಿತ್ಯ ನೂತನವೂ ಆಗಿದೆ, ಸನಾತನ ಧರ್ಮವು ಎಲ್ಲವನ್ನೂ ಒಪ್ಪಿಕೊಳ್ಳುತ್ತದೆ. ನಾನೂ ಸಹ ವಿಶ್ವದಾದ್ಯಂತ ಏನಾಗುತ್ತಿದೆ ಅಂತ ತಿಳಿದುಕೊಳ್ಳುತ್ತೇನೆ, ಮುಂದೇನು ಬರಬಹುದು? ನಾನು ಹೇಗೆ ಸ್ಪಂದಿಸಬಹುದು ಎಂದು ಕೇಳಿಕೊಳ್ಳುತ್ತೇನೆ, ನಮ್ಮ ಮಕ್ಕಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ ಎನ್ನುವ ಏಕೈಕ ಕಾರಣಕ್ಕೆ ಅತ್ಯಾಧುನಿಕ ವಿಚಾರಗಳನ್ನು ತಿಳಿದುಕೊಳ್ಳುವುದರಿಂದ ವಂಚಿತರಾಗಬಾರದು ಎಂದು ಅಭಿಪ್ರಾಯಪಟ್ಟರು.



ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಎಂ.ಮೋಹನ್ ಆಳ್ವ, ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ರಾಘವೇಂದ್ರ ಭಟ್, ಕ್ಯಾಂಪ್ಕೋ ಅಧ್ಯಕ್ಷ ಸತೀಶ್ ಚಂದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ವೈದಿಕ ಅಧ್ಯಯನ ವಿಭಾಗದ ವಿದ್ಯಾರ್ಥಿನಿಯರಿಂದ ವೇದಘೋಷದೊಂದಿಗೆ ಕಾರ್ಯಕ್ರಮ ಆರಂಭವಾಯಿತು, ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಎಂಬಿಬಿಎಸ್ ವಿದ್ಯಾರ್ಥಿನಿ ಗೌತಮಿ ಪೈ ತಮ್ಮ ಅನುಭವ ಹಂಚಿಕೊಂಡರು, ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷರಾದ ಡಾ ಬಿ.ಎನ್.ನರಸಿಂಹಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಾಂತಗೌಡ ಬಿರಾದಾರ್ ನಿರೂಪಿಸಿದರು.

