“ದಸರಾ ಕಳೆದ ನಂತರ ಮುಂದಿನ ವಾರದಲ್ಲೇ ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಮುಖಂಡರು, ಕೇಂದ್ರದ ಅಧಿಕಾರಿಗಳ ಸಭೆ ಕರೆಯುತ್ತೇನೆ. ಪ್ರತಿಭಟನೆ ಕೈ ಬಿಡಬೇಕು ಎಂದು ರೈತರಿಗೆ ಕೈಮುಗಿದು ಕೇಳುತ್ತೇನೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಪ್ರತಿಭಟನಾ ರೈತರ ಬಳಿ ಮನವಿ ಮಾಡಿದರು.

ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿದ್ದ ಕಬ್ಬು ಬೆಳೆಗಾರರನ್ನು ಶಿವಕುಮಾರ್ ಅವರು ಬೆಳಗಾವಿಯ ಕಿತ್ತೂರಿನಲ್ಲಿ ಶನಿವಾರ ಭೇಟಿ ಮಾಡಿ ಮಾತನಾಡಿದರು.
“ಕೇಂದ್ರ ಸಚಿವರನ್ನು ಭೇಟಿ ಮಾಡಿ ರೈತರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು ರಾಜ್ಯ ಸರ್ಕಾರವೊಂದರಿಂದಲೇ ರೈತರ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ ಇದರಲ್ಲಿ ಕೇಂದ್ರ ಸರ್ಕಾರ ಬ್ಯಾಂಕುಗಳು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ಪಾತ್ರವೂ ಇದೆ ಎಲ್ಲರೂ ಒಟ್ಟಾಗಿ ಕುಳಿತು ಚರ್ಚಿಸಿದಾಗ ಮಾತ್ರ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ” ಎಂದು ಹೇಳಿದರು.

“ರೈತರೇ ನಮ್ಮ ದೇವರುಗಳು ನಮ್ಮನ್ನು ಸಾಕಿ, ಬೆಳೆಸುವವರು ನೀವು ರೈತರಿಗೆ ಸಂಬಳವಿಲ್ಲ, ಪಿಂಚಣಿಯಿಲ್ಲ ಪ್ರಮೋಷನ್ ಇಲ್ಲ ನಿಮ್ಮ ಬದುಕಿನ ಭದ್ರತೆಗೆ ಸರ್ಕಾರ ಕೈಜೋಡಿಸಬೇಕು. ನಿಮ್ಮ ಸಮಸ್ಯೆಗಳನ್ನು ಅರಿತುಕೊಳ್ಳಲು ಬೆಂಗಳೂರಿನಿಂದ ಕಿತ್ತೂರಿಗೆ ಬಂದಿದ್ದೇನೆ, ನಿಮ್ಮ ಹೋರಾಟದ ನೋವು ಮತ್ತು ಸಂಕಷ್ಟಗಳು ನನಗೆ ಅರ್ಥವಾಗಿವೆ” ಎಂದು ತಿಳಿಸಿದರು.
“ರೈತ ಮುಖಂಡ ಚೂನಪ್ಪ ಪೂಜಾರಿ ಅವರೊಂದಿಗೆ ಈಗಾಗಲೇ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದಿದ್ದೇನೆ. ಸಹಕಾರ ಕೃಷಿ ಮತ್ತು ಸಕ್ಕರೆ ಸಚಿವರನ್ನು ದೆಹಲಿಗೆ ಕಳುಹಿಸಿ ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಲಾಗಿದೆ, ತಾವೂ ಸಕ್ಕರೆ ಸಚಿವರೊಂದಿಗೆ ಮಾತುಕತೆ ನಡೆಸಿದ್ದು ರೈತರ ಸಂಕಷ್ಟಗಳ ಬಗ್ಗೆ ಮಾಹಿತಿ ಪಡೆದುಕೊಂಡಿರುವುದಾಗಿ” ಹೇಳಿದರು.

“ಸಕ್ಕರೆ ಕಾರ್ಖಾನೆಗಳ ನಿರ್ವಹಣೆ ಮತ್ತು ಕಬ್ಬಿನ ಬೆಲೆ ನಿಗದಿ ವಿಚಾರದಲ್ಲಿ ಹಲವು ಸಮಸ್ಯೆಗಳಿವೆ. ಕಾರ್ಖಾನೆಗಳ ಮಾಲೀಕರು ನಷ್ಟ, ವಿದ್ಯುತ್ ಖರೀದಿ, ಉತ್ಪಾದನಾ ವೆಚ್ಚ ಹಾಗೂ ಇತರ ರಾಜ್ಯಗಳ ನಿಯಂತ್ರಣ ವ್ಯವಸ್ಥೆಯಲ್ಲಿನ ವ್ಯತ್ಯಾಸಗಳನ್ನು ಮುಂದಿಟ್ಟುಕೊಂಡು ತಮ್ಮ ಸಂಕಷ್ಟಗಳನ್ನು ಹೇಳುತ್ತಿದ್ದಾರೆ. ಕೆಲವು ಕಾರ್ಖಾನೆಗಳನ್ನು ನಡೆಸಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿಯೂ ನಿರ್ಮಾಣವಾಗಿದೆ ಈ ಕುರಿತು ನಾನೂ ಸಕ್ಕರೆ ಕಾರ್ಖಾನೆ ಮಾಲಿಕರನ್ನು ಪ್ರಶ್ನಿಸಿದ್ದೆ” ಎಂದರು.
“ಕಬ್ಬಿನ ಬೆಲೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಸೇರಿದಂತೆ ಯಾವ ಮಾರ್ಗದಲ್ಲಿ ನೆರವು ಒದಗಿಸಬಹುದು ಎಂಬುದರ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಕೇಂದ್ರ ಸರ್ಕಾರದ ಸಚಿವರನ್ನೂ ಭೇಟಿ ಮಾಡಿ ರೈತರ ಪರವಾಗಿ ಮನವಿ ಸಲ್ಲಿಸಲಾಗುವುದು” ಎಂದು ಭರವಸೆ ನೀಡಿದರು.

ರೈತರ ಸಂಘಟನೆ ಮತ್ತು ಹೋರಾಟದ ಶಕ್ತಿಯನ್ನು ಸರ್ಕಾರ ಗುರುತಿಸಿದೆ ರೈತರ ಧ್ವನಿ ವಿಧಾನಸೌಧದಿಂದ ದೆಹಲಿಯವರೆಗೂ ತಲುಪಿದೆ, ನಿಮ್ಮ ಸಮಸ್ಯೆಗಳನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ ರೈತರು ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ ರೈತರ ಹಿತ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ” ಎಂದು ಹೇಳಿದರು.
ರಾಜಕೀಯ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗುವುದಕ್ಕಿಂತ ಜನರ ಸಮಸ್ಯೆಗಳನ್ನು ಪರಿಹರಿಸುವುದು ಮುಖ್ಯ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ರೈತರ ನೋವು ಕಾರ್ಖಾನೆ ಮಾಲೀಕರಿಗೂ ಅರ್ಥವಾಗಬೇಕು. ಕಾರ್ಖಾನೆಗಳ ಸಮಸ್ಯೆಗಳನ್ನೂ ನಾವು ತಿಳಿದುಕೊಳ್ಳಬೇಕು ಎಂದರು.

“ರೈತರು ಇಲ್ಲಿಯವರೆಗೆ ಯಶಸ್ವಿಯಾಗಿ ಹೋರಾಟ ನಡೆಸಿದ್ದು ತಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ. ರೈತರು ಕಾನೂನು ಸಂಘರ್ಷಕ್ಕೆ ಅವಕಾಶವಾಗುವ ಘಟನೆಗಳಿಂದ ದೂರವಿರಬೇಕು” ಎಂದು ಮನವಿ ಮಾಡಿದರು.
ನಿಮ್ಮ ಸಮಸ್ಯೆ ಬಗೆಹರಿಯುವವರೆಗೆ ನಿಮ್ಮೊಂದಿಗೆ ಚರ್ಚಿಸಲು ಸಿದ್ಧನಿದ್ದೇನೆ. ನೀವು ನನ್ನ ಮೇಲೆ ನಂಬಿಕೆ ಇಟ್ಟಿದ್ದೀರಿ. ಆ ನಂಬಿಕೆಯನ್ನು ಉಳಿಸಿಕೊಳ್ಳುವುದು ನನ್ನ ಜವಾಬ್ದಾರಿ. ರೈತರ ಸಮಸ್ಯೆ ಪರಿಹಾರವಾಗಬೇಕು ಎಂಬ ಉದ್ದೇಶದಿಂದಲೇ ನಿಮ್ಮನ್ನು ಭೇಟಿ ಮಾಡಲು ಬಂದಿದ್ದೇನೆ ಎಂದು ಹೇಳಿದರು.

ಬರಗಾಲದ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು. ರೈತರ ಸಂಕಷ್ಟಕ್ಕೆ ಪರಿಹಾರ ಕಲ್ಪಿಸುವ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಒಟ್ಟಾಗಿ ನಿಲ್ಲಬೇಕು ಎಂದು ಹೇಳಿದರು.

ರೈತರಿಗೆ ವಿದ್ಯುತ್ ಪೂರೈಕೆಗಾಗಿ ರಾಜ್ಯ ಸರ್ಕಾರ ವಾರ್ಷಿಕ ಸುಮಾರು ₹22,000 ಕೋಟಿ ವೆಚ್ಚ ಮಾಡುತ್ತಿದೆ ಐದು ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ನೆರವು ನೀಡಲಾಗುತ್ತಿದೆ ಆದರೂ ಪ್ರಸ್ತುತ ಪರಿಸ್ಥಿತಿಯಲ್ಲಿ ರೈತರು ಮತ್ತು ಕೃಷಿ ಆಧಾರಿತ ಕೈಗಾರಿಕೆಗಳ ಸಮಸ್ಯೆಗಳನ್ನು ಪರಿಹರಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.

