ದಕ್ಷಿಣಕನ್ನಡ

ಮಂಗಳೂರು:- ಹಾಲುಮತ ಸಮುದಾಯದ ಬೇಡಿಕೆ ಈಡೇರಿಸುವ ರಾಜಕೀಯ ಪಕ್ಷಕ್ಕೆ ಬೆಂಬಲ; “ರುದ್ರಣ್ಣ ಗುಳಗುಳಿ”, ಸಿದ್ದರಾಮಯ್ಯ ಸಿಎಂ ಗಾದಿಯಿಂದ ಕೆಳಗಿಳಿದ ಬೆನ್ನಲ್ಲೇ ತೀವ್ರಗೊಂಡಿತೇ ಕುರುಬರ ಬೇಡಿಕೆ….?

ಹಾಲುಮತ ಸಮುದಾಯಕ್ಕೆ ಪರಿಶಿಷ್ಟ ಪಂಗಡದ (ಎಸ್‌ಟಿ) ಮೀಸಲಾತಿ ಸೌಲಭ್ಯವನ್ನು ರಾಜ್ಯಾದ್ಯಂತ ವಿಸ್ತರಿಸಬೇಕೆಂದು ಆಗ್ರಹಿಸಿ ಹಾಲುಮತ ಮಹಾಸಭಾ ರಾಜ್ಯವ್ಯಾಪಿ ಹೋರಾಟಕ್ಕೆ ಸಿದ್ಧತೆ ನಡೆಸಿದೆ. ಪ್ರಸ್ತುತ ಕೊಡಗು ಜಿಲ್ಲೆಗೆ ಸೀಮಿತವಾಗಿರುವ ಸಮುದಾಯದ ಎಸ್‌ಟಿ ಮಾನ್ಯತೆಯನ್ನು ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸಿ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನ ಅವಕಾಶ ಕಲ್ಪಿಸಬೇಕು ಎಂಬುದು ಮಹಾಸಭಾದ ಪ್ರಮುಖ ಬೇಡಿಕೆಯಾಗಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, 2027ರ ಚಳಿಗಾಲದ ಅಧಿವೇಶನದೊಳಗೆ ಈ ಬೇಡಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಜಾಗೃತಿ ಸಭೆಗಳನ್ನು ನಡೆಸಿ, ಸಂಸದರನ್ನು ಭೇಟಿಯಾಗಿ ಸಂಸತ್ತಿನಲ್ಲಿ ವಿಷಯ ಪ್ರಸ್ತಾಪಿಸುವಂತೆ ಒತ್ತಡ ಹೇರಲಾಗುವುದು. ಅಂತಿಮವಾಗಿ ಉಡುಪಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಬಿಜೆಪಿ ಅಥವಾ ಕಾಂಗ್ರೆಸ್ ಎಂಬ ಪಕ್ಷಭೇದವಿಲ್ಲದೆ ಹಾಲುಮತ ಸಮುದಾಯದ ಬೇಡಿಕೆಗೆ ಸ್ಪಂದಿಸುವ ಪಕ್ಷಕ್ಕೆ ರಾಜಕೀಯ ಬೆಂಬಲ ನೀಡಲಾಗುವುದು. ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಪ್ರಕ್ರಿಯೆಗೆ ವೇಗ ನೀಡುವ ಪಕ್ಷದ ಪರವಾಗಿ ಮತಗಳನ್ನು ಒಗ್ಗೂಡಿಸಲು ಸಿದ್ಧರಿದ್ದೇವೆ. ರಾಜ್ಯದ ಸುಮಾರು 65 ವಿಧಾನಸಭಾ ಕ್ಷೇತ್ರಗಳಲ್ಲಿ ಸಮುದಾಯ ನಿರ್ಣಾಯಕ ಪಾತ್ರ ವಹಿಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಬೇಡಿಕೆಯನ್ನು ನಿರ್ಲಕ್ಷಿಸುವ ರಾಜಕೀಯ ಪಕ್ಷಗಳು ಮುಂದಿನ ದಿನಗಳಲ್ಲಿ ಸಮುದಾಯದ ಬೆಂಬಲದ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗುತ್ತದೆ ಎಂದು ಮಹಾಸಭಾದ ಮುಖಂಡರು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಗೌರವ ಮತ್ತು ಹೆಮ್ಮೆ ವ್ಯಕ್ತಪಡಿಸಿದ ಮುಖಂಡರು, ಅವರು ಶೋಷಿತ ಸಮುದಾಯಗಳ ಪರವಾಗಿ ಕೆಲಸ ಮಾಡಿದ್ದು, ಹಾಲುಮತ ಸಮುದಾಯದ ನಿರೀಕ್ಷೆಗಳಿಗೆ ಅನುಗುಣವಾಗಿ ಇನ್ನಷ್ಟು ಕೆಲಸಗಳಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಡಾ. ಪ್ರಶಾಂತ್, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ರಂಗಪ್ಪ ನಡುಕಟ್ಟನ್, ಪುರುಷೋತ್ತಮ ಜೆ., ರಾಜ್ಯ ಸಂಚಾಲಕರಾದ ಹನುಮಂತ ಗೋಡಿ, ವೆಂಕಟೇಶ್ ಮೂರ್ತಿ, ಮಂಗಳೂರು ಜಿಲ್ಲಾಧ್ಯಕ್ಷ ಅಣ್ಣಯ್ಯ ದೊಡ್ಡಮನಿ, ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಕಾನನ್ನವರ, ಉಡುಪಿ ಜಿಲ್ಲಾಧ್ಯಕ್ಷ ಈರಪ್ಪ ಉಗಲವಾಟ, ಜಿಲ್ಲಾ ಕಾರ್ಯದರ್ಶಿ ಶಿವನಗೌಡ ಪಾಟೀಲ್, ಹಾಸನ ಜಿಲ್ಲಾಧ್ಯಕ್ಷ ಬೀರೇಗೌಡ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *