ನಿಟ್ಟೆ ವಿಶ್ವವಿದ್ಯಾಲಯದ 16ನೇ ವಾರ್ಷಿಕ ಘಟಿಕೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. 2026ರ ನವೆಂಬರ್ 6 ಮತ್ತು 7ರಂದು ಮಂಗಳೂರು ಹಾಗೂ ನಿಟ್ಟೆಯಲ್ಲಿ ಮೂರು ಹಂತಗಳಲ್ಲಿ ಘಟಿಕೋತ್ಸವ ನಡೆಯಲಿದೆ. ಈ ಬಾರಿ ವಿವಿಧ ವಿಭಾಗಗಳ ಒಟ್ಟು 3,325 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದ್ದು, 57 ಚಿನ್ನದ ಪದಕ ಹಾಗೂ 159 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷ ಪತ್ರಗಳನ್ನು ನೀಡಿ ಗೌರವಿಸಲಿದೆ ಎಂದು ನಿಟ್ಟೆ ಕುಲಪತಿ ಪ್ರೊ.ಡಾ.ಎಂ.ಎಸ್. ಮೂಡಿತ್ತಾಯ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.

ನವೆಂಬರ್ 6ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್‌ನಲ್ಲಿ ಮೊದಲ ಹಂತದ ಘಟಿಕೋತ್ಸವ ನಡೆಯಲಿದೆ.
ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಾದ PGIMERನ ನಿರ್ದೇಶಕ ಪ್ರೊ. ಡಾ. ವಿವೇಕ್ ಲಾಲ್ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.

ನವೆಂಬರ್ 7ರಂದು ಬೆಳಿಗ್ಗೆ 10 ಗಂಟೆಗೆ ನಿಟ್ಟೆಯ NMAMIT ಆಫ್-ಕ್ಯಾಂಪಸ್ ಕೇಂದ್ರದಲ್ಲಿ ಎರಡನೇ ಹಂತದ ಘಟಿಕೋತ್ಸವ ನಡೆಯಲಿದೆ.
ಬೆಂಗಳೂರಿನ ಎನ್-ವ್ಯಾಸ ವಿಶ್ವವಿದ್ಯಾಲಯದ ಸಹ-ಕುಲಾಧಿಪತಿ ಹಾಗೂ ಪುಣೆಯ DIATನ ಮಾಜಿ ಕುಲಪತಿ ಡಾ. ಪ್ರಫುಲ್ಲ ರಾಮದಾಸ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದೇ ದಿನ ಸಂಜೆ 4 ಗಂಟೆಗೆ ಮೂರನೇ ಹಂತದ ಘಟಿಕೋತ್ಸವ ನಡೆಯಲಿದೆ.
ಡಿಜಿಟಲ್ ಸಂಶೋಧಕರು, NMAMIT ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳ ಪದವಿ ವಿದ್ಯಾರ್ಥಿಗಳು ಈ ಸಮಾರಂಭದಲ್ಲಿ ಪದವಿ ಸ್ವೀಕರಿಸಲಿದ್ದಾರೆ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಅಧ್ಯಕ್ಷ ಹಾಗೂ ಪ್ರಸಾರ ಭಾರತಿಯ ಮಾಜಿ ಸಿಇಓ ಶ್ರೀ ಶಶಿ ಶೇಖರ್ ವೆಂಪಟಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಮೂರು ಹಂತದ ಘಟಿಕೋತ್ಸವಗಳಿಗೂ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಶ್ರೀ ವಿನಾಲ್ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ, ಸಹ ಕುಲಾಧಿಪತಿ ಪ್ರೊ. ಡಾ. ಎಂ. ಶಾಂತಾರಾಮ ಶೆಟ್ಟಿ ಹಾಗೂ ಕುಲಪತಿ ಪ್ರೊ. ಡಾ. ಎಂ. ಎಸ್. ಮೂಡಿತಾಯ ಸೇರಿದಂತೆ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಗಣ್ಯರು ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ರಿಜಿಸ್ಟರ್ ಹರ್ಷ ಹಾಲಹಳ್ಳಿ, ಸಿಇಓ ಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

